ವಾಷಿಂಗ್ಟನ್ : ಅಕ್ರಮ ವಲಸಿಗರನ್ನು ದೇಶದಿಂದ ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿರುವ ಅಮೆರಿಕದ ಅಧಿಕಾರಿಗಳು, ಇದೀಗ ಕೆಲ ರಾಜ್ಯಗಳಲ್ಲಿನ ಸಿಖ್ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಹೀಗಾಗಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಅಲ್ಲೇ ಉಳಿದುಕೊಂಡಿದ್ದ ಭಾರತೀಯರಿಗೆ ಕಂಟಕ ಆರಂಭವಾಗಿದೆ.
ಅಮೆರಿಕದ ಆಂತರಿಕ ಭದ್ರತೆಯ ವಿಭಾಗದ ಅಧಿಕಾರಿಗಳು, ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ ಭಾಗವಾಗಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಕೆಲವು ಗುರುದ್ವಾರಗಳಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ದಾಖಲೆ ರಹಿತ ವಲಸಿಗರು ಇರುವ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ನಡುವೆ ‘ಗುರುದ್ವಾರಗಳಂತಹ ಪೂಜಾ ಸ್ಥಳಗ ಳನ್ನು ಗುರಿಯಾಗಿಸಿ ಶೋಧ ನಡೆಸುತ್ತಿರುವ ಅಮೆರಿಕದ ಅಧಿಕಾರಿಗಳ ನಿರ್ಧಾರದಿಂದ ನಾವು ಗಾಬರಿಗೊಂಡಿದ್ದೇವೆ. ಇದು ಅತ್ಯಂತ ಕಳವಳಕಾರಿ ವಿಚಾರವಾಗಿದೆ’ ಎಂದು ಸಿಖ್ ಅಮೆರಿಕನ್ ಲೀಗಲ್ ಡಿಫೆನ್ಸ್ ಮತ್ತು ಎಜುಕೇಶನ್ ಫಂಡ್ (ಎಸ್‌ಎಎಲ್ ಡಿಎಫ್)ನ ಕಾರ್ಯನಿರ್ವಾಹಕ ನಿರ್ದೇಶಕಿ ಕಿರಣ್ ಕೌರ್‌ಗಿಲ್ ಹೇಳಿದ್ದಾರೆ

