ಹೊಸದಿಲ್ಲಿ : ಕೇಂದ್ರ ಚುನಾವಣಾ ಆಯೋಗದ ಮುಂದಿನ ಮುಖ್ಯ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಂಗಳವಾರ ನಿವೃತ್ತಿಯಾಗಲಿದ್ದು, ಈ ಸ್ಥಾನಕ್ಕೆ ಸೇವಾವಧಿಯಲ್ಲಿ ಹಿರಿಯರಾಗಿರುವ ಜ್ಞಾನೇಶ್ ಕುಮಾರ್ ಅವರೇ ಆಯ್ಕೆಯಾಗುವುದು ಖಚಿತವಾಗಿದೆ. ಒಂದೊಮ್ಮೆ ಇವರ ಆಯ್ಕೆಯಾದರೆ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭೆ ಇವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ.
1988 ಬ್ಯಾಚ್‌ನ ಕೇಡರ್ ಅಧಿಕಾರಿಯಾಗಿರುವ ಜ್ಞಾನೇಶ್‌ಕುಮಾರ್, ಈ ಹಿಂದೆ ಗೃಹ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದುಗೊಳಿಸುವ ವಿಧೇಯಕದ ಕರಡು ರೂಪಿಸಿದ್ದವರು ಇವರೇ ಎಂಬುದು ವಿಶೇಷ
ಈ ಮಧ್ಯೆ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಸಮಿತಿಯು ಸಭೆ ಸೇರಿ ಚರ್ಚೆ ನಡೆಸಿತು. ಈ ಮಧ್ಯೆ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿರುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಸರ್ವೋಚ್ಚ ನ್ಯಾಯಾಲಯದ ವಿಚಾರಣೆ ಬಳಿಕ ಈ ಆಯ್ಕೆಯಾಗಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

