ಡೆಹ್ರಾಡೂನ್ : ಉತ್ತರಾಖಂಡದ ಉಪ ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಹೋಗಿದ್ದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿದ್ದ ಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ 12000 ಅಡಿ ಎತ್ತರದ ನಿರ್ಜನ, ಮೈಕೊರೆವ ಚಳಿಯ ಪ್ರದೇಶ ದಲ್ಲಿ 17 ಗಂಟೆ ಸಿಕ್ಕಿಬಿದ್ದ ಘಟನೆ ಬುಧವಾರ ನಡೆದಿದೆ. ಅದೃಷ್ಟವಶಾತ್ ಆ ಪ್ರದೇಶದಲ್ಲಿ ಚಾರಣ ನಡೆಸುತ್ತಿದ್ದ ಬೆಂಗಳೂರಿಗ ರಾಜೀವ್‌ರನ್ನು ರಕ್ಷಿಸಿದ್ದಾರೆ.
ಏನಿದು ಪ್ರಕರಣ ?
ಉತ್ತರಾಖಂಡದ ಮಿಲಾಂನಲ್ಲಿ ನಿಗದಿಯಾಗಿದ್ದ ಚುನಾವಣೆ ಸಿದ್ಧತೆ, ಪರೀಕ್ಷಿಸಲು ರಾಜೀವ್ ಕುಮಾರ್, ಉತ್ತರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವಿಜಯ್ ಕುಮಾರ್ ಜೋಗ್ ದಂಡೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಕೈಗೊಂಡಿದ್ದರು. ಆದರೆ ಹವಾಮಾನ ವೈಪರೀತ್ಯದ ಕಾರಣ ರಲಾಂ ಎಂಬಲ್ಲಿ ಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು.
ಈ ಸಮಯದಲ್ಲಿ ಚಳಿ ಹೆಚ್ಚಿರುವ ಕಾರಣ ರಾಲಂ ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು, ಕಣಿವೆ ಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಗ್ರಾಮದಲ್ಲಿ ಯಾರೂ ಸಿಗದೇ, ಅಧಿಕಾರಿಗಳು ಮೈಕೊರೆವ ಚಳಿಯಲ್ಲಿ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದ್ದರು.
ಈ ನಡುವೆ ಅದೇ ಗ್ರಾಮದ ಬಳಿ ಚಾರಣ ಕೈಗೊಂಡಿದ್ದ ಬೆಂಗಳೂರಿನ ಚಾರಣಿಗೆ ಸಂಜೆ 5.00 ಗಂಟೆ ವೇಳೆಗೆ ಸಿಇಸಿ ಮತ್ತು ಇತರರನ್ನು ನೋಡಿ ಗುರುತಿಸಿದ್ದಾರೆ. ತಮ್ಮ ಬಳಿ ಇದ್ದ ಇನ್‌ಸ್ಟಂಟ್ ನೂಡಲ್ಸ್ ಮತ್ತು ಒಣಹಣ್ಣುಗಳನ್ನು ನೀಡಿ ರಕ್ಷಿಸಿ ದ್ದಾರೆ. ಬಳಿಕ ಸಮೀಪದಲ್ಲೇ ಇದ್ದ ಖಾಲಿ ಮನೆಯೊಂದಕ್ಕೆ ತೆರಳಿ, ಅಲ್ಲಿ ಬೆಂಕಿ ಹಾಕಿ ಚಳಿಯಿಂದ ಬಚಾವ್ ಆಗಲು ನೆರವು ನೀಡಿದ್ದಾರೆ. ಮರುದಿನ ಬೆಳಗ್ಗೆ ಐಟಿಬಿಪಿ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.