ಹೊಸದಿಲ್ಲಿ :ಭಾರತೀಯ ವಾಯುಪಡೆಯ ಪೈಲಟ್ ಮತ್ತು ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಅವರ ಮೂವರು ಸಹಯಾತ್ರಿಗಳು, ಆಕ್ಸಿಯಮ್ ಮಿಷನ್-4 (ಎ ಎಕ್ಸ್-4) ಉಡಾವಣಾ ಸಿದ್ಧತೆಗಾಗಿ ಕಾರಂಟೈನ್‌ಗೆ ತೆರಳಿದ್ದಾರೆ.
ಜೂ.8ರಂದು ಈ ಆಕ್ಸಿಯಮ್ ಮಿಷನ್ – 4 ಉಡಾವಣೆಗೊಳ್ಳಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಲಿರುವ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರರಾಗಲಿದ್ದಾರೆ. ಈ ಖಾಸಗಿ ಸಹಯೋಗದ ಮಿಷನ್ ಅನ್ನು ಅಮೆರಿಕದ ಆಕ್ಸಿಯಮ್ ಸ್ಪೇಸ್, ನಾಸಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ನಡೆಸುತ್ತಿವೆ.
ಈ ತಂಡವು ಹಲವು ತಿಂಗಳುಗಳ ಕಾಲ ಅಮೆರಿಕದ ಆಕ್ಸಿಯಮ್ ಸ್ಪೇಸ್, ನಾಸಾ ಮತ್ತು ಸ್ಪೇಸ್ ಎಕ್ಸ್‌ನಲ್ಲಿ ಕಟ್ಟುನಿಟ್ಟಾದ ತರಬೇತಿ ಪಡೆದುಕೊಂಡಿದೆ. ಜೂ.8ರಂದು, ಭಾರತೀಯ ಕಾಲಮಾನ ಪ್ರಕಾರ, ಸಂಜೆ 6.41ಕ್ಕೆ ಫ್ಲೋರಿಡಾದ ನಾಸಾ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಹೊರಡಲಿದೆ.
14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗುವ ಈ ನಾಲ್ವರ ತಂಡ, ಜಾಗತಿಕ ಜ್ಞಾನ ಹಂಚಿಕೆ, ಮೈಕ್ರೋಗ್ರಾವಿಟಿ ಸಂಶೋಧನೆ ಮತ್ತು ತಾಂತ್ರಿಕ ಪ್ರದರ್ಶನಗಳನ್ನು ನಡೆಸಲಿದೆ.

