ನವದೆಹಲಿ : ದೆಹಲಿಯಿಂದ ಶ್ರೀನಗರಕ್ಕೆ ಹಾರುವಾಗ ಹವಾಮಾನ ಪ್ರಕ್ಷುಬ್ದತೆಗೆ ಒಳಗಾಗಿದ್ದ 220 ಜನರಿದ್ದ ಇಂಡಿಗೋ ವಿಮಾನವು. ಅದರಿಂದ ಪಾರಾಗಲು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಕ್ಕೆ ಅನುಮತಿ ಕೋರಿತ್ತು. ಆದರೆ ಪಾಕ್‌ನ ಲಾಹೋರ್ ವಾಯು ಸಂಚಾರ ನಿಯಂತ್ರಣ ಕಚೇರಿ (ಎಟಿಸಿ)ಯು ಆ ವಿನಂತಿಯನ್ನು ತಿರಸ್ಕರಿಸಿ ಅಮಾನವೀಯತೆ ಮೆರೆಯಿತು.
ಈ ವೇಳೆ ದಿಢೀರನೇ ಒಂದೇ ನಿಮಿಷದಲ್ಲಿ 8500 ಅಡಿಗಳಷ್ಟು ಕುಸಿದ ವಿಮಾನದ ನೆರವಿಗೆ ಧಾವಿಸಿದ ಭಾರತೀಯ ವಾಯುಪಡೆಯು, ಇಂಡಿಗೋ ವಿಮಾನಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ ಅದು ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿಯಲು ಸಹಾಯ ಮಾಡಿತು. ತನ್ಮೂಲಕ ಅಷ್ಟೂ ಜನರ ಜೀವ ಉಳಿಸಿತು ಎಂಬ ಮೈನವಿರೇಳಿಸುವ ವಿಷಯ ಬಹಿರಂಗವಾಗಿದೆ.
ಈ ಬಗ್ಗೆ ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ವಾಯುಪಡೆ ಅಧಿಕೃತವಾಗಿ ಹೇಳಿಕೆ ನೀಡಿದ್ದು, ವಿಮಾನವನ್ನು ಹೇಗೆ ರಕ್ಷಿಸಲಾಯಿತು ಎಂಬ ಕ್ಷಣಕ್ಷಣದ ಮಾಹಿತಿ ನೀಡಿವೆ.

ದೆಹಲಿ – ಶ್ರೀನಗರ ವಾಯಮಾರ್ಗ
1.ಬುಧವಾರ ರಾತ್ರಿ 5 ಸಂಸದರು ಸೇರಿ 220 ಮಂದಿ ಹೊತ್ತು ನವದೆಹಲಿಯಿಂದ ಶ್ರೀನಗರದತ್ತ ಹಾರಿದ ಇಂಡಿಗೋ ವಿಮಾನ
2.ಪಠಾಣ್‌ಕೋಟ್ ಮೇಲೆ ಸಾಗುವಾಗ ಹದಗೆಟ್ಟ ಹವಾಮಾನ, ಪ್ರಕ್ಷುಬ್ಧತೆ. ಪಾಕ್ ವಾಯುಸೀಮೆ ಸುರಕ್ಷಿತ ಎಂಬುದು ಪತ್ತೆ
3.ವಾಯುಪಡೆ ಸಲಹೆ ಮೇರೆಗೆ ಪಾಕ್ ವಾಯುಸೀಮೆ ಪ್ರವೇಶಕ್ಕೆ ಅನುಮತಿ ಯಾಚನೆ. ಲಾಹೋರ್ ಎಟಿಸಿಯಿಂದ ನಕಾರ
4.ದಿಢೀರನೆ 8500 ಅಡಿಯಷ್ಟು ಕುಸಿದ ವಿಮಾನ. ವಾಯುಪಡೆಯಿಂದ ನೆರವಿನ ಹಸ್ತ. ಪ್ರಕ್ಷುಬ್ಧತೆಯಲ್ಲೂ ಶ್ರೀನಗರದತ್ತ ಯಾನ
5.ವಿಮಾನದಲ್ಲಿ ಭಾರಿ ಹೊಯ್ದಾಟ. ಪ್ರಯಾಣಿಕರು ಆತಂಕಗೊಂಡು ಚೀರಾಟ. ಪ್ರತಿಕೂಲತೆಯಿಂದ ವಿಮಾನ ಮೂತಿಗೆ ಹಾನಿ
6. ಪ್ರತಿ ಹಂತದಲ್ಲೂ ಸುರಕ್ಷಿತ ಮಾರ್ಗದ ಬಗ್ಗೆ ವಾಯುಪಡೆ ನಿರ್ದೇಶನ. ಮ್ಯಾನುವಲ್ ಮೋಡ್‌ನಲ್ಲಿ ಶ್ರೀನಗರದಲ್ಲಿ ಲ್ಯಾಂಡಿಂಗ್

