ಕೇಪ್ ಕೆನವೆರಲ್ : ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳಿಂದ ಸಿಕ್ಕಿ ಹಾಕಿಕೊಂಡಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಕ್ಟೋರ್ ಅವರನ್ನು ವಾಪಸ್ ಕರೆತರಲು ನಾಸಾ ಸಜ್ಜಾಗಿದೆ. ಇದರ ಭಾಗವಾಗಿ ಸ್ಪೇಸ್ ಹಾರಿ ಬಿಟ್ಟಿದ್ದ ನಾಲ್ವರು ಗಗನಯಾತ್ರಿಗಳಿದ್ದ ಗಗನನೌಕೆ ಭಾನುವಾರ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ್ದು, ಈ ಹೊಸ ಸದಸ್ಯರನ್ನು ಸುನಿತಾ ಸ್ವಾಗತಿಸಿದ್ದಾರೆ.
ಈ ನಾಲ್ವರು ಗಗನಯಾತ್ರಿಗಳಾದ ನಾಸಾದ ಅನ್ನೆಮೆನ್, ನಿಕೋಲ್ ಅಯೇರ್ಸ್, ಜಪಾನ್ ತಕುಯಾ ಒನಿಶಿ, ರಷ್ಯಾದ ಕಿರಿಲ್ ಪೆಸ್ಕೋ ಅವರಿಗೆ ಸುನಿತಾ ಮತ್ತು ಬುಚ್ ಅಗತ್ಯ ತರಬೇತಿ ನೀಡಲಿದ್ದು ಆ ಬಳಿಕ ಇದೇ ಗಗನನೌಕೆ ಮೂಲಕ ಬಹುತೇಕ ಈ ಇಬ್ಬರೂ ಬುಧವಾರ ವಾಪಸಾಗಲಿದ್ದಾರೆ. ಕಳೆದ ವರ್ಷ ಸುನಿತಾ ಮತ್ತು ಬುಚ್ ಅವರನ್ನು ಬೋಯಿಂಗ್‌ನ ಮೊದಲ ಬಾಹ್ಯಾಕಾಶ ನೌಕೆ ಸ್ಟಾರ್‌ಲೈನರ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು.
10 ದಿನಗಳಿಗಾಗಿ ಹೋಗಿದ್ದ ಇವರು ಗಗನ ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಗಳಿಂದಾಗಿ ಅಲ್ಲೇ ಉಳಿಯುವಂತಾಯಿತು. ಇದೀಗ ಸ್ಪೇಸ್‌ಎಕ್ಸ್‌ನ ಟ್ರ್ಯಾಗನ್ ನೌಕೆ ನಾಸಾದ ಇಬ್ಬರು ಸೇರಿ ನಾಲ್ವರು ಗಗನಯಾತ್ರಿಗಳೊಂದಿಗೆ ಅಲ್ಲಿ ತಲುಪಿದ್ದು, ಈ ನೌಕೆಯಲ್ಲೇ ಸುನಿತಾ ಮತ್ತು ಬುಚ್ ಮಾ.19ರಂದು ವಾಪಸಾಗುವ ನಿರೀಕ್ಷೆ ಇದೆ.

