ಇಸ್ಲಾಮಾಬಾದ್ : ಲಷ್ಕರ್ -ಎ-ತೈಬಾದ ರಾಜಕೀಯ ವಿಭಾಗದ ಮುಖ್ಯಸ್ಥ ಮೌಲಾನಾ, ಕಾಶಿಫ್ ಆಲಿಯನ್ನು ಪಾಕಿಸ್ತಾನದ ಖೈಬರ್ ಪಖ್‌ತುನ್‌ಖ್ಯಾ ಪ್ರಾಂತ್ಯದ ಸ್ವಾಬಿಯಲ್ಲಿ ಆತನ ನಿವಾಸದಲ್ಲಿ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ. ಲಷ್ಕರ್-ಎ-ತೈಬಾದ ರಾಜಕೀಯ ಘಟಕವಾದ ಪಾಕಿಸ್ತಾನ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ನೇತೃತ್ವ ಅಲಿ ವಹಿಸಿದ್ದನು.
ಮೋಟಾರ್ ಸೈಕಲ್‌ನಲ್ಲಿ ಅವರ ನಿವಾಸಕ್ಕೆ ಬಂದ ಅಪರಿಚಿತ ಬಂದೂಕುಧಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಕಾಶಿಫ್ ಮನೆ ಬಾಗಿಲಿಗೆ ಬಂದು ಗುಂಡು ಹಾರಿಸಿದ್ದಾರೆ. ಮೌಲಾನಾ ಕಾಶಿಫ್ ಅಲಿಯ ಹತ್ಯೆ ಪಾಕಿಸ್ತಾನದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು, ಎಲ್‌ಇಟಿಗೆ ಸಂಬಂಧಿಸಿದ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನ ಸರ್ಕಾರವನ್ನು ಟೀಕಿಸಿವೆ ಮತ್ತು ತಲೆಮರೆಸಿಕೊಂಡಿರುವ ಮೌಲಾನಾ ಕಾಶಿಫ್ ಅಲಿಯ ಹಂತಕರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿವೆ.ಕಳೆದ ತಿಂಗಳಲ್ಲಿ, ಮೂವರು ಲಷ್ಕರ್ -ಎ-ತೈಬಾ ಭಯೋತ್ಪಾದಕರನ್ನು ಕೊಲ್ಲಲಾಗಿದ್ದು ಅವರಲ್ಲಿ ಇಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ, ಪಾಕಿಸ್ತಾನ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಆದರೆ ಭಯೋತ್ಪಾದಕ ಸಂಘಟನೆಗಳು ಕ್ರಮ ಕೈಗೊಳ್ಳಲು ಒತ್ತಡ ಹೇರುತ್ತಲೇ ಇವೆ. ಅಲಿ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಯಾವುದೇ ಭಯೋತ್ಪಾದಕ ಗುಂಪು ಸಹ ಈ ದಾಳಿಯ ಹೊಣೆ ವಹಿಸಿಕೊಂಡಿಲ್ಲ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

