ಬ್ಯಾಂಕಾಕ್ : ಮ್ಯಾನ್ಮಾರ್‌ನಲ್ಲಿ ಶನಿವಾರ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 1,644ಕ್ಕಿಂತ ಹೆಚ್ಚಾಗಿದೆ. ದೇಶದ ಎರಡನೇ ಅತಿದೊಡ್ಡ ನಗರದಲ್ಲಿ ಕುಸಿದುಬಿದ್ದ ಕಟ್ಟಡಗಳಿಂದ ಹೆಚ್ಚಿನ ಶವಗಳನ್ನು ಹೊರ ತೆಗೆಯಲಾಗಿದೆ. 1,002 ಮಂದಿ ಮೃತ ಪಟ್ಟಿದ್ದು, 3,400 ಮಂದಿ ಗಾಯಗೊಂಡಿದ್ದಾರೆ ಮತ್ತು 30 ಮಂದಿ ಕಾಣೆಯಾಗಿದ್ದಾರೆ ಎಂದು ಸರ್ಕಾರ ವರದಿ ಮಾಡಿದೆ

ನೆಲಕ್ಕುರುಳಿದ ಕಟ್ಟಡಗಳು, ಒಡೆದ ಅಣೆಕಟ್ಟು :
ಶುಕ್ರವಾರ ಮಧ್ಯಾಹ್ನ ಮ್ಯಾಂಡಲೆ ಬಳಿ ಸಂಭವಿಸಿದ ಭೂಕಂಪದ ನಂತರ 6.4. ತೀವ್ರತೆಯ ಕಂಪನ ಸೇರಿದಂತೆ ಹಲವು ಕಂಪನಗಳು ಸಂಭವಿಸಿದವು. ಪರಿಣಾಮವಾಗಿ ಕಟ್ಟಡಗಳು ಉರುಳಿವೆ, ರಸ್ತೆಗಳು ಇಬ್ಬಾಗವಾಗಿವೆ, ಸೇತುವೆಗಳು ಕುಸಿದಿವೆ, ಅಣೆಕಟ್ಟು ಒಡೆದಿದೆ. ನಾಯಿಡಾದಲ್ಲಿ ಸಿಬ್ಬಂದಿಗಳು ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಮಾಡಿದರು. ಆದರೆ ನಗರದ ಹೆಚ್ಚಿನ ಭಾಗ ವಿದ್ಯುತ್, ಫೋನ್ ಮತ್ತು ಇಂಟರ್ನೆಟ್ ಸಂಪರ್ಕದಿಂದ ದೂರವುಳಿದಿದೆ. ಸರ್ಕಾರಿ ವಸತಿ ಕಟ್ಟಡಗಳೂ ಕುಸಿದಿದ್ದು, ಆ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿದ್ದಾರೆ.

ಥೈಲ್ಯಾಂಡ್‌ನಲ್ಲಿ ಹೆಚ್ಚು ಹಾನಿ :
ಭೂಕಂಪ ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಇತರ ಭಾಗಗಳನ್ನು ಬೆಚ್ಚಿಬೀಳಿಸಿದೆ. ಚಾಟುಚಾಕ್ ಮಾರುಕಟ್ಟೆಯ ಬಳಿಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಆರು ಮಂದಿ ಮೃತಪಟ್ಟಿದ್ದರೆ, 26 ಮಂದಿ ಗಾಯಗೊಂಡಿದ್ದಾರೆ ಮತ್ತು 47 ಮಂದಿ ಕಾಣೆಯಾಗಿದ್ದಾರೆ ಎಂದು ನಗರದ ಅಧಿಕಾರಿಗಳು ವರದಿ ಮಾಡಿದ್ದಾರೆ. ಶನಿವಾರ ಹೊಸ ಸಲಕರಣೆಗಳನ್ನು ತರಲಾಗಿದೆಯಾದರೂ, ಬದುಕುಳಿದವರನ್ನು ಹುಡುಕುವ ಭರವಸೆ ಕ್ಷೀಣಿಸಿದೆ. ಜನರು ತಮ್ಮವರನ್ನು ಹುಡುಕುತ್ತಾ ಗೋಳಾಡುತ್ತಿರುವ ದೃಶ್ಯಗಳು ಮನ ಕಲುಕುವಂತಿದ್ದವು.

