ಹೊಸದಿಲ್ಲಿ: ‘ವಿಕಸಿತ ಭಾರತ’ ಧೈಯದ ಸಾಕಾರಕ್ಕಾಗಿ ರಾಜಕೀಯ ರಂಗಕ್ಕೆ ಧುಮುಕುವಂತೆ, ರಾಜಕೀಯ ಹಿನ್ನೆಲೆ ರಹಿತ ಯುವಶಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರಾಜಕೀಯದ ಗಂಧಗಾಳಿ ರಹಿತ ಯುವಶಕ್ತಿ ಸ್ವಾತಂತ್ರ್ಯ ಚಳವಳಿಯಲ್ಲಿ ಮೆರೆದ ಅಭೂತಪೂರ್ವ ಸ್ಫೂರ್ತಿಯ ಮರುಕಳಿಕೆ ಇಂದು ಅನಿವಾರ್ಯವಾಗಿದೆ ಎಂದವರು ಹೇಳಿದ್ದಾರೆ.
ಯಾವುದೇ ರಾಜಕೀಯ ಹಿನ್ನೆಲೆ ರಹಿತ ಒಂದು ಲಕ್ಷ ಯುವಶಕ್ತಿ ರಾಜಕೀಯ ರಂಗ ಪ್ರವೇಶಿಸುವಂತೆ ನಾನು ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಕೆಂಪುಕೋಟೆಯಿಂದ ಕರೆ ನೀಡಿದ್ದೆ ಮತ್ತು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿವಾರವಾದ ರಾಜನೀತಿಯು ಹೊಸ ಪ್ರತಿಭೆಗಳನ್ನು ಹೊಸಕಿ ಹಾಕುತ್ತಿದೆ ಎಂದು ಬಹುತೇಕ ಯುವಕರು ಆರೋಪಿಸಿದ್ದಾರೆ. ನಮ್ಮ ಅಪಾರ ಸಂಖ್ಯೆಯ ಯುವಕರು ಸಕ್ರಿಯ ರಾಜಕೀಯರಂಗ ಪ್ರವೇಶಿಸಲು ಉತ್ಸುಕರಾಗಿದ್ದಾರೆ ಎಂಬುದು ತನ್ಮೂಲಕ ವೇದ್ಯವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ
ಪ್ರತಿ ಮಹಿಳೆಯರ ರಕ್ಷಣೆ ನಮ್ಮ ಕರ್ತವ್ಯವಾಗಬೇಕು
ಮಹಿಳೆಯರ ರಕ್ಷಣೆ ನಮ್ಮ ಆದ್ಯತೆಯಾಗಬೇಕು. ಈ ದೇಶದ ಪ್ರತಿಯೊಬ್ಬ ತಾಯಿ, ಅಕ್ಕ- ತಂಗಿ ಹಾಗೂ ಮಗಳ ರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ, ಪ್ರತಿ ರಾಜ್ಯ ಸರ್ಕಾರಕ್ಕೂ ನಾನು ಹೇಳುವುದಿಷ್ಟೆ ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು ಅಕ್ಷಮ್ಯ. ತಪ್ಪಿತಸ್ಥರು ಯಾರೇ ಇದ್ದರೂ ಬಿಡಬಾರದು. ತಪ್ಪಿತಸ್ಥರಿಗೆ ಸಹಾಯ ಮಾಡುವವ ರನ್ನೂ ಬಿಡಬಾರದು.
• ನರೇಂದ್ರ ಮೋದಿ ಪ್ರಧಾನಿ