ಹೊಸದಿಲ್ಲಿ: ಧ್ಯಾನ, ನಾಯಕತ್ತ, ಪರೀಕ್ಷೆ ಮತ್ತು ಜ್ಞಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ನಿಮ್ಮನ್ನು ನೀವು ಸವಾಲುಗಳಿಗೆ ಒಡ್ಡಿಕೊಳ್ಳಿ ಎಂದು ಸಲಹೆ ನೀಡಿದರು. ಸೋಮವಾರ ತಮ್ಮ ವಾರ್ಷಿಕ ‘ಪರೀಕ್ಷಾ ಪೆ ಚರ್ಚಾ’ ದ ಎಂಟನೇ ಆವೃತ್ತಿಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಅವರು ಮುಕ್ತ ಸಂಭಾಷಣೆ ನಡೆಸಿದರು. ಕುತೂಹಲಕಾರಿ ಮತ್ತು ಒಳನೋಟವಿದ್ದ ಸಂಭಾಷಣೆ ಗಮನ ಸೆಳೆಯಿತು. ಸಾಂಪ್ರದಾಯಿಕ ಟೌನ್‌ಹಾಲ್ ಸ್ವರೂಪಕ್ಕಿಂತ ಭಿನ್ನವಾಗಿ, ಈ ವರ್ಷದ ಅಧಿವೇಶನವನ್ನು ಹೊಸದಿಲ್ಲಿಯ ಸುಂದರ್ ನರ್ಸರಿಯಲ್ಲಿ ಹೆಚ್ಚು ಆನೌಪಚಾರಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಮೋದಿ ಸುಮಾರು 35 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ರಾಷ್ಟ್ರ ವ್ಯಾಪಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಭಾಗವಹಿಸಿದ್ದರು.
ಪರೀಕ್ಷೆ ವರ್ಸಸ್ ಜ್ಞಾನ :
ಜ್ಞಾನ ಮತ್ತು ಪರೀಕ್ಷೆಗಳು ಜೀವನದ ಎರಡು ವಿಭಿನ್ನ ಅಂಶಗಳು. ಪರೀಕ್ಷೆಗಳನ್ನು ಅಂತಿಮ ಗುರಿಯೆಂದು ಗ್ರಹಿಸುವುದನ್ನು ಬಿಡಿ, ಬದಲಿಗೆ ಅವರ ಹವ್ಯಾಸಗಳನ್ನು ಮುಕ್ತವಾಗಿ ಅನ್ವೇಷಿಸಲು ಪ್ರೋತ್ಸಾಹಿಸಬೇಕು. ಹಾಗೆ ಮಾಡುವ ಮೂಲಕ, ಬೋರ್ಡ್ ಪರೀಕ್ಷೆಗಳ ಒತ್ತಡವನ್ನು ನಿವಾರಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಸಮಯ ಪಾಲನೆ ಮತ್ತು ವಾಸ್ತವದ ಬದುಕು :
ಸಮಯ ನಿರ್ವಹಣೆಯ ಬಗ್ಗೆ ಒಳನೋಟಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಿದರು. ಯೋಜನೆ ರೂಪಿಸುವುದು, ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಸಕಾರಾತ್ಮಕ ದೃಷ್ಟಿಕೋನ, ಮತ್ತು ವೈಯಕ್ತಿಕ ಬೆಳವಣಿಗೆಗೆ ಒಬ್ಬರ ಕೌಶಲಗಳನ್ನು ಪೋಷಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಪೋಷಕರ ಒತ್ತಡ ನಿಭಾಯಿಸುವುದು :
ಪೋಷಕರ ನಿರೀಕ್ಷೆಯ ಸಮಸ್ಯೆಯ ಬಗ್ಗೆ ಮಾತನಾಡಿದ ಮೋದಿ, ಪೋಷಕರು ತಮ್ಮ ಮಕ್ಕಳನ್ನು ಮಾಡೆಲ್‌ಗಳೆಂದು ಭಾವಿಸಬಾದರು. ಬೋರ್ಡ್ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ವಿದ್ಯಾರ್ಥಿಯ/ಭವಿಷ್ಯ ನಿರ್ಣಯಿಸುವ ಸಾಮಾಜಿಕ ಪ್ರವೃತ್ತಿಯನ್ನು ಅವರು ಟೀಕಿಸಿದರು. ಕಡಿಮೆ ಅಂಕಗಳೊಂದಿಗೆ ಜೀವನವು ಕೊನೆಗೊಳ್ಳುವುದಿಲ್ಲ. ಧನಾತ್ಮಕ ನೆಲೆಯಲ್ಲಿ ನಿರಂತರವಾಗಿ ತಮಗೆ ತಾವೇ ಸವಾಲುಗಳನ್ನು ಹಾಕಿಕೊಳ್ಳುವಂತೆ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

