ಬರ್ಧಾಮನ್ (ಪ.ಬಂಗಾಳ) : ವೈವಿಧ್ಯತೆಯನ್ನು ಒಳಗೊಂಡ ಏಕತೆ ಎತ್ತಿ ಹಿಡಿಯುವ ಹಿಂದು ಸಮಾಜ ದೇಶದ ಜವಾಬ್ದಾರಿಯುತ ಸಮುದಾಯವಾಗಿದ್ದು ಹಿಂದು ಸಮಾಜವನ್ನು ಮತ್ತಷ್ಟು ಸಶಕ್ತವಾಗಿ ಒಗ್ಗೂಡಿಸುವುದು ಅತ್ಯಗತ್ಯ ವೆಂದು ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗ್ವತ್ ಪ್ರತಿಪಾದಿಸಿದ್ದಾರೆ.
ಹಿಂದು ಸಮಾಜದತ್ತ ಮಾತ್ರ ಆದ್ಯ ಗಮನವೇಕೆಂದು ಜನರು ಸದಾ ನನ್ನಲ್ಲಿ ಪ್ರಶ್ನಿಸುತ್ತಿರುತ್ತಾರೆ. ಪ್ರತಿಯಾಗಿ, ಹಿಂದು ಸಮಾಜ ದೇಶದ ಹೊಣೆಗಾರಿಕೆಯುಕ್ತ ಸಮಾಜವೆಂಬುದು ತನ್ನ ಉತ್ತರವಾಗಿದೆ ಎಂದರು.
ಬಂಗಾಳ ಪೊಲೀಸರು ಸಮ್ಮತಿ ನಿರಾಕರಿಸಿದ್ದ ಆರೆಸ್ಸೆಸ್ ರ್ಯಾಲಿಯು ಕಲ್ಕತ್ತಾ ಹೈಕೋರ್ಟ್ ಸಮ್ಮತಿ ಯೊಂದಿಗೆ ಸುಸೂತ್ರವಾಗಿ ನಡೆಯಿತು. ಬಳಿಕ ಬರ್ಧಾಮನ್ ಸಾಯಿ ಅಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗ್ವತ್ ಪಾಲ್ಗೊಂಡರು.
ಸಂಘದ ವಿಚಾರಧಾರೆ, ಅದರ ಕಾರ್ಯಚಟುವಟಿಕೆಗಳ ಮಾಹಿತಿ, ಅರಿವಿಲ್ಲದವರು ಆರೆಸ್ಸೆಸ್‌ನ ಆಶಯವೇನೆಂದು ಅಚ್ಚರಿಪಡುತ್ತಾರೆ. ಹಿಂದು ಸಮಾಜ ಸಂಘಟಿಸಲು ಆರೆಸ್ಸೆಸ್ ಬಯಸುತ್ತದೆ. ಯಾಕೆಂದರೆ ಹಿಂದು ಸಮಾಜವು ದೇಶದ ಅತ್ಯಂತ ಜವಾಬ್ದಾರಿಯುತ ಸಮಾಜವಾಗಿದೆ ಎಂದು ಪುನರುಚ್ಚರಿಸಿದ ಭಾಗ್ವತ್, ಜಗತ್ತಿನ ವೈವಿಧ್ಯತೆಯನ್ನು ಸ್ವೀಕರಿಸುವ ಅಗತ್ಯ ಸಾರಿದರು.
ಭರತವರ್ಷವೆಂದರೆ ವಿಶಿಷ್ಟ ಗುಣ ಸ್ವರೂಪ ಭರತವರ್ಷದ ಭೌಗೋಳಿಕ ಸ್ವರೂಪವಲ್ಲ. ಕಾಲಕ್ರಮೇಣ ಇದರ ಗಾತ್ರ ವಿಸ್ತರಿಸಲ್ಪಡಬಲ್ಲದು ಅಥವಾ ಕುಗ್ಗಬಲ್ಲದು. ತನ್ನ ವಿಶಿಷ್ಟ ಸ್ವರೂಪದಿಂದಾಗಿ ದೇಶವು ಭರತವರ್ಷವೆಂಬ ಅಭಿದಾನ ಪಡೆದಿದೆ. ಭಾರತವು ತನ್ನದೇ ಆದ ಅಂತರ್ಗತ ಸ್ವರೂಪ, ಚಾರಿತ್ರ್ಯಸಂಪನ್ನವಾಗಿದೆ. ಭರತವರ್ಷದ ಈ ತೆರ ವಿಶಿಷ್ಟ ಸ್ವರೂಪದೊಂದಿಗೆ ಒಗ್ಗಿಕೊಳ್ಳಲಾಗದವರು ತಮ್ಮದೇ ಸ್ವಂತ ಪ್ರತ್ಯೇಕ ರಾಷ್ಟ್ರಗಳನ್ನು ಹುಟ್ಟು ಹಾಕಿದರು. ಸಹಜವಾಗಿಯೇ, ಉಳಿದವರು ಭಾರತದ ಸಾರಾಂಶವನ್ನು ಪ್ರೀತಿಯಿಂದ ಅಂಗಿಕರಿಸಲು ಸಂಕಲ್ಪಬದ್ಧರಾದರು.
ಈ ಸಾರಾಂಶವಾದರೂ ಏನು? ಇದು 1947 ಆ.15ಕ್ಕಿಂತಲೂ ಪ್ರಾಚೀನವಾದುದು. ಜಗತ್ತಿನ ಎಲ್ಲ ವೈವಿಧ್ಯಗಳನ್ನು ಒಪ್ಪಿಕೊಂಡು ಪ್ರವರ್ಧ ಮಾನವಾದ ಸಮಾಜವೇ ಹಿಂದು ಸಮಾಜ. ಜಗತ್ತಿನೆಲ್ಲಾ ವೈವಿಧ್ಯಗಳ ಪ್ರೀತಿಯಿಂದ ಸ್ವೀಕರಿಸಿ ಅದರೊಂದಿಗೆ ಮುಂದಡಿ ಇಡುವುದು ಹಿಂದು ಸಮಾಜದ ಸ್ವಭಾವ. ಈ ಐಹಿಕ ಸತ್ಯ ಯಾವತ್ತೂ ಬದಲಾಗದು. ನಾವು ವಿವಿಧತೆಯಲ್ಲಿ ಏಕತೆ ಎನ್ನುತ್ತೇವೆ. ಆದರೆ ವೈವಿಧ್ಯತೆಯೇ ಸ್ವಯಂ ಏಕತೆ ಎಂದು ಹಿಂದು ಸಮಾಜ ಪರಿಗಣಿಸಿದೆ ಎಂದು ಭಾಗ್ವತ್ ವಿವರಿಸಿದರು

