ನವದೆಹಲಿ : ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ಯಿಂದ ತೆರವಾದ ಉಪ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾ ಗಿದೆ. ಭಾನುವಾರ ಇಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ, ಹಿರಿಯ ಆರ್‌ಎಸ್‌ಎಸ್ ನಾಯಕನನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಪಕ್ಷ ನಿರ್ಧರಿಸಿತು.
ಬಿಜೆಪಿ ಸಂಸದೀಯ ಮಂಡಳಿಯ ಸಭೆಯ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮೈತ್ರಿಕೂಟದ ಅಭ್ಯರ್ಥಿಯ ಹೆಸರು ಪ್ರಕಟಿಸಿದರು. 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದರ ಬೆನ್ನಲ್ಲೇ ಒಬಿಸಿ (ಗೌಂಡರ್) ಸಮುದಾ ಯಕ್ಕೆ ಸೇರಿದ ದಕ್ಷಿಣದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ತಮಿಳುನಾಡಿನ ಮೋದಿ ಎಂದೇ ಬಣ್ಣಿತ ರಾಧಾಕೃಷ್ಣನ್ ರಾಜಕೀಯ ವಲಯದಲ್ಲಿ ದಮನಿತರ ಸಬಲೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಮಾನವೀಯತೆಯ ಜೀವಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಸೆ.9ರಂದು ಉಪರಾಷ್ಟ್ರಪತಿ ಚುನಾವಣೆ ನಿಗದಿಯಾಗಿದೆ. ಗೆಲುವಿಗೆ 394 ಮತಗಳ ಅಗತ್ಯವಿದ್ದು, ಎನ್ ಡಿಎಗೆ 422 ಸಂಸದರ ಬಲ ಹೊಂದಿರುವ ಕಾರಣ ರಾಧಾಕೃಷ್ಣನ್ ಆಯ್ಕೆ ಖಚಿತವಾಗಿದೆ.

