ಹೊಸದಿಲ್ಲಿ : ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಮೋದಿಯ ಕಿರಿಯ ಸಹೋದರ ನೆಹಾಲ್ ಮೋದಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಭಾರತದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅಧಿಕಾರಿಗಳ ಹಸ್ತಾಂತರ ಕೋರಿಕೆಯ ನಂತರ ಈ ಬಂಧನವಾಗಿದೆ.
ಇಂಟರ್ ಪೋಲ್ ರೆಡ್ ನೋಟಿಸ್ ಗೆ ಒಳಪಟ್ಟಿರುವ ನೆಹಾಲ್ ಮೋದಿ, ಹಣ ಕಳ್ಳಸಾಗಾಣೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಲ್ಲಿ ಕ್ರಿಮಿನಲ್ ಪಿತೂರಿ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ. ಮುಂದಿನ ನ್ಯಾಯಾಲಯದ ವಿಚಾರಣೆ ಜುಲೈ 17ಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲಿ ನೆಹಾಲ್ ಜಾಮೀನು ಕೋರಬಹುದು ಎನ್ನಲಾಗಿದೆ.
ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ, 13,000 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆಯಲ್ಲಿ ನೆಹಾಲ್ ಮೋದಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ನಕಲಿ ಕಂಪನಿಗಳು ಮತ್ತು ವಿದೇಶೀ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾಯಿಸಲು ನೆಹಾಲ್ ಸಹಾಯ ಮಾಡಿದ್ದಾನೆ ಎಂದು ಭಾರತೀಯ ಏಜೆನ್ಸಿಗಳು ಆರೋಪಿಸಿವೆ. ಸಾಕ್ಷ್ಯಗಳನ್ನು ನಾಶಪಡಿಸಿದ ಮತ್ತು ದುಬೈಯಿಂದ ಚಿನ್ನ ಹಾಗೂ ಹಣವನ್ನು ವರ್ಗಾಯಿಸುವ ಮೂಲಕ ನೀರವ್ ಮೋದಿಗೆ ಸಹಾಯ ಮಾಡಿದ ಆರೋಪದ ಮೇಲೆ ಇಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಸಾಕ್ಷ್ಯಗಳನ್ನು ನಾಶಪಡಿಸಿದ್ದಕ್ಕಾಗಿ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ನೆಹಾಲ್ ಹೆಸರಿಸಿದೆ.

