ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹಿನ್ನೆಲೆ ಕೆಲ ಕಾಲ ರಷ್ಯಾ ತೈಲ ಖರೀದಿ ಕಡಿತಗೊಳಿಸಿದ್ದ ಭಾರತದ ತೈಲ ಕಂಪನಿಗಳು ಮತ್ತೆ ರಷ್ಯಾದಿಂದ ತೈಲ ಖರೀದಿ ಪುನಾರಂಭ ಮಾಡಿವೆ. ಈ ಬಾರಿ ರಷ್ಯಾ ಕಂಪನಿ ಗಳು ಭಾರತಕ್ಕೆ ಹೆಚ್ಚುವರಿಯಾಗಿ ಶೇ.5ರಷ್ಟು ರಿಯಾಯ್ತಿ ಘೋಷಿಸಿವೆ ಎನ್ನಲಾಗಿದೆ.
ಕಳೆದ ವರ್ಷ ಭಾರತ, ತನ್ನ ಒಟ್ಟು ಬೇಡಿಕೆಯ ಪೈಕಿ ಶೇ.40ರಷ್ಟು ಕಚ್ಚಾತೈಲವನ್ನು ರಷ್ಯಾದಿಂದಲೇ ಖರೀದಿ ಮಾಡಿತ್ತು. ಯುರೋಪ್ ಮತ್ತು ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ರಷ್ಯಾ ರಿಯಾಯ್ತಿ ದರದಲ್ಲಿ ಪೂರೈಕೆಯ ಆಫರ್ ನೀಡಿದ್ದು ಇದಕ್ಕೆ ಕಾರಣವಾಗಿತ್ತು.
ಆದರೆ ಭಾರತ ಹೀಗೆ ತೈಲ ಖರೀದಿ ಮೂಲಕ ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಪರೋಕ್ಷವಾಗಿ ಹಣ ಪೂರೈಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇದೇ ಕಾರಣಕ್ಕೆ ಆ.27ರಿಂದ ಜಾರಿಗೆ ಬರುವಂತೆ ಭಾರತದ ಉತ್ಪನ್ನಗಳಿಗೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಘೋಷಣೆ ಮಾಡಿದ್ದರು. ಹೀಗಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ‘ಭಾರತ್ ಪೆಟ್ರೋಲಿಯಂ ಕಂಪನಿಗಳು ರಷ್ಯಾ ತೈಲ ಖರೀದಿಗೆ ಕೊಂಚ ಬ್ರೇಕ್ ಹಾಕಿದ್ದವು. ಆದರೆ ಇದೀಗ ಮತ್ತೆ ಈ ಕಂಪನಿಗಳು ಮುಂಬರುವ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತೈಲ ಖರೀದಿಗೆ ಬೇಡಿಕೆ ಸಲ್ಲಿಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.

