ಭುವನೇಶ್ವರ : ನಮ್ಮ ದೇಶವು ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಮತ್ತು ಸಿದ್ಧ ವಸ್ತುಗಳನ್ನು ಆಮದು ಮಾಡುವ ಪದ್ಧತಿ ಇನ್ನೂ ಮುಂದುವರಿಯುವುದನ್ನು ಒಪ್ಪಲಾಗದು. ಇದರ ಬದಲಿಗೆ ಭಾರತದಲ್ಲೇ ಮೌಲ್ಯವರ್ಧಿತ ಉತ್ಪಾದನೆ ಆಗುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಆಗ್ರಹಪೂರ್ವಕವಾಗಿ ಹೇಳಿದ್ದಾರೆ.
ಅವರು ಒಡಿಶಾ ರಾಜಧಾನಿ ಭುವನೇಶ್ವರದ ಜನತಾ ಮೈದಾನದಲ್ಲಿ ‘ಉತ್ಕರ್ಷ್ ಒಡಿಶಾ, ಮೇಕ್ ಇನ್ ಒಡಿಶಾ ಕಾನ್ಪ್ಲೇವ್’ನ್ನು ಉದ್ಘಾಟಿಸಿ ಮಾತನಾಡಿ, ಪೂರ್ವ ಭಾರತವು ದೇಶದ ಅಭಿವೃದ್ಧಿಯ ಯಂತ್ರವೆಂದು ನಾನು ಪರಿಗಣಿಸಿರುವೆ. ಈ ನಿಟ್ಟಿನಲ್ಲಿ ಒಡಿಶಾ ರಾಜ್ಯವು ಇದರಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಒಂದು ದೇಶವು ಕೇವಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವುದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ನಾವು ನಮ್ಮ ಇಡೀ ವ್ಯವಸ್ಥೆಯನ್ನೇ ಬದಲಾಯಿಸಬೇಕಿದ್ದು, ಹೊಸ ದೃಷ್ಟಿ ಕೋನದೊಂದಿಗೆ ಕೆಲಸ ಮಾಡಬೇಕಿದೆ. ಇಲ್ಲಿ ಖನಿಜಗಳನ್ನು ಉತ್ಪನನ ಮಾಡಿ ಹೊರತೆಗೆದು ಇತರ ದೇಶಗಳಿಗೆ ಹಾಗೆಯೇ ರಫ್ತು ಮಾಡಲಾಗುತ್ತಿದೆ. ಅಲ್ಲಿ ಅವು ಮೌಲ್ಯವರ್ಧನೆಗೊಂಡು ಸಿದ್ಧ ವಸ್ತುಗಳಾಗಿ ಮರಳಿ ಭಾರತಕ್ಕೆ ಕಳುಹಿಕೊಡುತ್ತಾರೆ.
ಈ ಪ್ರವೃತ್ತಿಯನ್ನು ನಾನು ಒಪ್ಪಲಾರೆ. ಸಾಗರೋತ್ಪನ್ನಗಳನ್ನು ಸಂಸ್ಕರಣೆಗಾಗಿ ಇತರ ದೇಶಗಳಿಗೆ ರಫ್ತು ಮಾಡುತ್ತಿರುವುದನ್ನು ಅವರು ಉದಾಹರಣೆಯಾಗಿ ನೀಡಿ, ಇದು ಅಂತ್ಯಗೊಂಡು ನಾವೇ ಕಚ್ಚಾ ವಸ್ತುಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ವಸ್ತುಗಳನ್ನಾಗಿ ಮಾಡಿ ರಫ್ತು ಮಾಡುವಂತಾಗಬೇಕು ತ ಎಂದು ಮೋದಿಯವರು ಆಗ್ರಹಿಸಿದರು. ರಾಜ್ಯಪಾಲ ಕಂಭಮ್ಪತಿ ಹರಿ ಬಾಬು, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಜುಲಾ ಓರಾಮ್, ಅಶ್ವಿನಿ ವೈಷ್ಣವ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.