ಹೊಸದಿಲ್ಲಿ : ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವನ್ನು ಆಪರೇಷನ್ ಸಿಂದೂರ್ ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧಿಯವರ ನಡುವಿನ ಸಂವಾದಕ್ಕೆ 100 ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ರಾಷ್ಟ್ರದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದರು. ಭಾರತ ನಿರ್ಮಿತ ಶಸ್ತ್ರಾಸ್ತ್ರಾಗಳು ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಸ್ಪಷ್ಟ ಪರಿಣಾಮ ಬೀರಿವೆ. ಭಯೋತ್ಪಾದಕರ ಯಾವುದೇ ಅಡಗುತಾಣ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರ :
ದೇಶ ರಕ್ಷಣೆಯಲ್ಲಿ ಹೆಚ್ಚು ಆತ್ಮನಿರ್ಭರ (ಸ್ವಾವಲಂಬಿ) ಆಗುತ್ತಿರುವುದರಿಂದ ವಿದೇಶಿ ಶಸ್ತ್ರಾಸ್ತ್ರಾಗಳ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗುತ್ತಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಲು ಭಾರತೀಯ ಸೇನೆ ಭಾರತದ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿದ್ದು ತ್ವರಿತ ಯಶಸ್ಸು ಸಾಧಿಸಿದೆ. ಭಾರತೀಯ ಶಸ್ತ್ರಾಸ್ತ್ರಾಗಳು ಜಾಗತಿಕ ಮನ್ನಣೆ ಪಡೆಯುತ್ತವೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.

