ಹೊಸದಿಲ್ಲಿ : ಭಾರತಕ್ಕೆ ಐದು ದಿನಗಳ ಅಧಿಕೃತ ಭೇಟಿ ನೀಡುತ್ತಿರುವ ಫಿಲಿಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಸೋಮವಾರ ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಮಾರ್ಕೋಸ್ ಅವರೊಂದಿಗೆ ಪತ್ನಿ ಲೂಯಿಸ್ ಅರನೇಟಾ ಮಾರ್ಕೋಸ್, ಸಂಪುಟದ ಸಚಿವರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಆಗಮಿಸಲಿದೆ.
ಫಿಲಿಪೀನ್ಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭಾರತಕ್ಕೆ ಮಾರ್ಕೋಸ್ ಅವರ ಮೊದಲ ಭೇಟಿ ಇದಾಗಿದೆ. ಪ್ರವಾಸದ ಸಂದರ್ಭದಲ್ಲಿ ಮಾರ್ಕೋಸ್ ರಾಷ್ಟ್ರಪತಿ ಬ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರನ್ನು ಭೇಟಿಯಾಗಲಿದ್ದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾರತ ಮತ್ತು ಫಿಲಿಪೀನ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳು 1949ರ ನವೆಂಬರ್‌ನಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಉಭಯ ದೇಶಗಳು ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಕಡಲ ಸಹಕಾರ, ಕೃಷಿ, ಆರೋಗ್ಯ ರಕ್ಷಣೆ, ಔಷಧಗಳು, ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಬಲವಾದ ಪಾಲುದಾರಿಕೆ ಹೊಂದಿವೆ.

