ಬೆಂಗಳೂರು : ರಾಜ್ಯ ಬಜೆಟ್ ಅಧಿವೇಶನದ ವೇಳೆ ಚರ್ಚೆಗೆ ಬಂದ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಸಚಿವರು ಸೇರಿದಂತೆ ಪ್ರಮುಖ ನಾಯಕರ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು. ಈ ಅರ್ಜಿಯನ್ನು ಕೂಡಲೇ ವಿಚಾರಣೆಗೆ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಸಚಿವರು ಮಾತ್ರವಲ್ಲದೇ ನ್ಯಾಯಮೂರ್ತಿ ಹೆಸರಿರುವುದನ್ನು ಅರ್ಜಿದಾರರು ಉಲ್ಲೇಖಿಸಿರುವುದರಿಂದ ಇನ್ನೆರಡು ದಿನಗಳಲ್ಲಿ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ. ನಾಳೆ ಅಥವಾ ನಾಡಿದ್ದು ವಿಚಾರಣೆ ನಡೆಯುವ ಸಾಧ್ಯತೆಯಿದೆ.
48 ಪ್ರಮುಖರಿಗೆ ಹನಿಟ್ರ್ಯಾಪ್ :
ಇದೊಂದು ಗಂಭೀರ, ಆಘಾತಕಾರಿ ವಿಷಯವಾಗಿದ್ದು, ನ್ಯಾಯಮೂರ್ತಿ, ಶಾಸಕರು, ಸಚಿವರು ಸೇರಿ 48 ಜನರಿಗೆ ಹನಿಟ್ರ್ಯಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ವ್ಯಕ್ತಿಗಳ ವೈಯಕ್ತಿಕ ಗೌರವವನ್ನ ಉಳಿಸಬೇಕು. ಇದೊಂದು ದೊಡ್ಡ ಹಗರಣವಾಗಿರುವ ಸಾಧ್ಯತೆ ಇರುವುದರಿಂದ ಕೂಲಂಕಶ ತನಿಖೆಯಾದರೆ ಎಲ್ಲ ಸತ್ಯಾಸತ್ಯತೆ ಹೊರಬರಲಿದೆ. ಹಾಗಾಗಿ ಯಾವುದಾದದರೂ ಸ್ವತಂತ್ರ್ಯ ತನಿಖಾ ಸಂಸ್ಥೆಗೆ ತನಿಖೆಯ ಜವಬ್ದಾರಿ ನೀಡಬೇಕು ಎಂದು ಮನವಿ ಮಾಡಲಾಗಿದೆ.

