ನಿಕೋಸಿಯಾ : ಜಗತ್ತು ಹಲವು ಸಂಘರ್ಷಗಳು ಮತ್ತು ಉದ್ವಿಗ್ನತೆಗಳಿಗೆ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ಇದು ಯುದ್ಧದ ಯುಗವಲ್ಲ ಎಂಬ ಭಾರತದ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೈಪ್ರಸ್‌ನಲ್ಲಿ ಪುನರುಚ್ಚರಿಸಿದ್ದಾರೆ.
ಸೈಪ್ರಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಲ್ಲಿನ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌ ಲೈಡ್ಸ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ‘ಪಶ್ಚಿಮ ಏಷ್ಯಾ ಮತ್ತು ಯುರೋಪಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ನಾವಿಬ್ಬರೂ (ಮೋದಿ ಮತ್ತು ನಿಕೋಸ್) ಕಳವಳ ವ್ಯಕ್ತಪಡಿಸಿದ್ದೇವೆ. ಸಂಘರ್ಷದ ನಕಾರಾತ್ಮಕ ಪರಿಣಾಮ ಕೇವಲ ಆ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಯುದ್ಧದ ಯುಗವಲ್ಲ ಎಂಬುದು ನಮ್ಮಿಬ್ಬರ ಅಭಿಪ್ರಾಯ. ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಮತ್ತು ಪುನಃ ಸ್ಥಿರತೆ ಯನ್ನು ಸ್ಥಾಪಿಸುವಂತೆ ಮಾನವೀಯತೆಗೆ ಕರೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.
ಅಂತೆಯೇ, ತಮ್ಮ ಈ ಭೇಟಿಯು, ಭಾರತ -ಸೈಪ್ರಸ್ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯಲು ಸುವರ್ಣಾವಕಾಶ ಎಂದರು. ಬಳಿಕ ಸೈಪ್ರಸ್ ಭೇಟಿ ಮುಗಿಸಿದ ಮೋದಿ ಜಿ7 ಶೃಂಗಕ್ಕಾಗಿ ಕೆನಡಾಗೆ ತೆರಳಿದರು.

