ಹೊಸದಿಲ್ಲಿ : ನಮ್ಮ ಕೆಲಸ ದಾಳಿ ಮಾಡುವುದು. ಈಗ ಅವರ ಕೆಲಸ ಶವಗಳನ್ನು ಸಂಗ್ರಹಿಸುವುದು ಎಂದು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಓ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದ್ದಾರೆ
ಮಾಧ್ಯಮಕ್ಕೆ ಪಾಕ್ ವಿರುದ್ಧ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಅವರು, ಗಡಿಯಾಚೆಗಿನ ಬೆದರಿಕೆಗಳನ್ನು ಎದುರಿಸುವಲ್ಲಿ ಭಾರತ ರಕ್ಷಣಾತ್ಮಕ ಸ್ಥಿತಿಯಿಂದ ಆಕ್ರಮಣಕಾರಿ ನಿಲುವಿಗೆ ಬದಲಾಗಿರುವುದನ್ನು ಸ್ಪಷ್ಟಪಡಿಸಿದರು.
ಪಾಕಿಸ್ತಾನದ ಪ್ರತಿಕ್ರಿಯೆ ವಿವೇಚನೆ ರಹಿತವಾಗಿತ್ತು. ಅವರ ಶೆಲ್ ದಾಳಿ ತುರ್ತು ಕಾರ್ಯಾಚರಣೆಯನ್ನು ಬಿಂಬಿಸುತ್ತಿತ್ತು. ಆದರೆ ಭಾರತೀಯ ಪಡೆಗಳು ತಮ್ಮ ನಿಲುವು ಬದಲಿಸಲಿಲ್ಲ. ಪರಿಸ್ಥಿತಿ ಉಲ್ಬಣವಾಗುತ್ತಿದ್ದರೂ, ನಾಗರಿಕರಿಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದವು ಎಂದರು.
ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಾಯುಪಡೆಯ ಏರ್ ಮಾರ್ಷಲ್ ಎ.ಕೆ. ಭಾರ್ತಿ – ಡಿಜಿ ಏರ್ ಅಪರೇಷನ್ಸ್, ನೌಕಾಪಡೆಯ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ್ ಮೂವರೂ ಸೇನಾ ಪ್ರಮುಖರು ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದರು.
9 ಉಗ್ರ ಶಿಬಿರ ಧ್ವಂಸ :
ಭಾರತ ನಿಯಂತ್ರಣ ರೇಖೆಯಾದ್ಯಂತ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳೊಳಗಿನ ಭಯೋತ್ಪಾದಕ ಮೂಲ ಸೌಕರ್ಯಗಳ ಮೇಲೆ ಸಂಘಟಿತ ದಾಳಿಯನ್ನು ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಸಿತು. ಮೇ 7ರಂದು ಪ್ರಾರಂಭಿಸಲಾದ ದಾಳಿಗಳು, ಕಾಶ್ಮೀರ ಮತ್ತು ಅದರಾಚೆಗೆ ಹೊಸ ಒಳನುಸುಳುವಿಕೆಗೆ ಸಿದ್ಧತೆ ನಡೆಸುತ್ತಿವೆ ಎಂದು ನಂಬಲಾದ ಒಂಬತ್ತು ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಿದವು ಎಂದು ಭಾರತೀಯ ಸೇನೆಯ ಡಿಜಿಎಂಬ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು.
ಕರಾಚಿ ಬಂದರಿನ ಮೇಲೆ ದಾಳಿಗೆ ನೌಕಾಪಡೆ ಸಿದ್ಧವಾಗಿತ್ತು :
ವೈಸ್ ಅಡ್ಮಿರಲ್ ಪ್ರಮೋದ್ ಕುಮಾರ್, ದಾಳಿಯ ಸಮಯದಲ್ಲಿ ಅರೇಬಿಯನ್ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಸಿದ್ದ ಸ್ಥಿತಿಯಲ್ಲಿದೆ. ಕರಾಚಿ ಬಂದರು ಸೇರಿದಂತೆ ತನ್ನ ಗುರಿಗಳ ಮೇಲೆ ದಾಳಿ ಮಾಡಲು ನೌಕಾಪಡೆಗೆ ಅಧಿಕಾರವಿತ್ತು. ಇಂಧನ ಡಿಪೋಗಳು, ಬಂದರುಗಳು ಮತ್ತು ರಾಡಾರ್ ಇನ್ನಾಲೇಷನ್‌ಗಳು ವ್ಯಾಪ್ತಿಯಲ್ಲಿದ್ದವು. ಆದೇಶ ಬಂದರೆ, ನಾವು ದಾಳಿ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಈ ಮೂಲಕ ಮೂರೂ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂಬ ಸುಳಿವು ನೀಡಿದರು.
ನಿಖರ ದಾಳಿಗಳು, ಭಾರೀ ಸಾವುನೋವು :
ಕಾರ್ಯಾಚರಣೆಯ ನಿರ್ದಿಷ್ಟ ರೂಪುರೇಷೆಗಳನ್ನು ಬಹಿರಂಗಪಡಿಸದೆ, ಭಾರತೀಯ ಮಿಲಿಟರಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಿದೆ ಎಂದು ದೃಢಪಡಿಸಿತು. ಇದರಲ್ಲಿ ಯೂಸುಫ್ ಆಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಅವರಂತಹ ದೀರ್ಘಕಾಲದಿಂದ ಹುಡುಕಲಾಗುತ್ತಿದ್ದ ಭಯೋತ್ಪಾದಕರೂ ಸೇರಿದ್ದಾರೆ. ಭಾರತದಲ್ಲಿ ನಡೆದ ದಾಳಿಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.

