ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನದ ಕೈವಾಡವಿರುವ ಆತಂಕಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪ ಪಟ್ಟಿಯಲ್ಲಿ ದಾಖಲಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಈಗಾಗಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ ಆರೋಪ ಪಟ್ಟಿಯಲ್ಲಿದ್ದ ಆತಂಕಕಾರಿ ಮಾಹಿತಿಗಳು ಇದೀಗ ಬಹಿರಂಗಗೊಂಡಿವೆ.
ರಾಮೇಶ್ವರಂ ಕೆಫೆ ಸ್ಫೋಟ ನಡೆಸಿದ ತಂಡದಲ್ಲಿ ಶಂಕಿತ ಉಗ್ರ ಫೈಸಲ್ ಹೆಸರು ಕೇಳಿಬಂದಿತ್ತು. ಈತನ ವಿರುದ್ಧ ಎನ್ ಐಎ ಪ್ರಕರಣ ದಾಖಲಿಸಿಕೊಂಡು ಆರನೇ ಆರೋಪಿಯಾಗಿಸಿ ತನಿಖೆ ನಡೆಸಿತ್ತು ಈತನ ಜಾಡು ಹಿಡಿದ ಎನ್‌ಐಎಗೆ ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಅಲ್ಲದೇ ಇತರ ಶಂಕಿತ ಉಗ್ರರ ಬಗ್ಗೆಯೂ ಎನ್‌ಐಎ ಆರೋಪಟ್ಟಿಯಲ್ಲಿ ಮಾಹಿತಿ ನೀಡಿದ್ದು ಮಂಗಳೂರು ಕುಕ್ಕರ್ ಸ್ಪೋಟದ ರೂವಾರಿಗಳಾದ ಅಬ್ದುಲ್ ಮತೀನ್ ತಾಹಾ ಮತ್ತು ಶಾಜಿಬ್ ನಾಪತ್ತೆಯಾಗಿದ್ದರು. ಕೆಲಕಾಲದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸಾಗಿದ್ದರು. ಈ ವೇಳೆ ಮೆಜೆಸ್ಟಿಕ್ ಬಳಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುಜಾಮಿಲ್ ಷರೀಫ್ ಎಂಬಾತನ ಪರಿಚಯವಾಗಿತ್ತು. ಈತನೇ ತಾಹಾ, ಶಾಜಿಬ್ ಮನ ಪರಿವರ್ತಿಸಿ ಐಸಿಸ್‌ಗೆ ಸೇರ್ಪಡೆ ಮಾಡಿದ್ದ. ಬಳಿಕ ಅವರನ್ನು ಪಳಗಿಸಲು ಒಂದಷ್ಟು ದುಷ್ಕೃತ್ಯಗಳಲ್ಲಿ ತೊಡಗಿದ್ದ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ದಾಖಲಿಸಿದೆ.