ಬೆಂಗಳೂರು : ಮಾನವರನ್ನು ಮೊದಲ ಬಾರಿ ಬಾಹ್ಯಾಕಾಶಕ್ಕೆ ಕಳಿಸುವ ಇಸ್ರೋದ ಮಹತ್ವಾಕಾಂಕ್ಷಿ ‘ಗಗನ ಯಾನ’ ಯೋಜನೆ ಭಾಗವಾಗಿ ಇದೇ ಸಂಯೋಜಿತ ಏರ್ ಡ್ರಾಪ್ ಪರೀಕ್ಷೆ (ಐಎಡಿಟಿ-01)ಯನ್ನು ಶ್ರೀಹರಿಕೋಟಾದಲ್ಲಿ ನಡೆಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಪ್ಯಾರಾಚೂಟ್ ಆಧರಿತ ಪರೀಕ್ಷೆ ಇದಾಗಿದ್ದು, ಸಿಬ್ಬಂದಿಯ ಸುರಕ್ಷಿತ ಮರಳುವಿಕೆಗೆ ಇದು ಅಗತ್ಯವಾಗಿದೆ.
‘ಪ್ಯಾರಾಚೂಟ್ ಆಧರಿತ ವೇಗ ತಗ್ಗಿಸುವ ಪ್ರಕ್ರಿಯೆಯನ್ನು ಐಎಡಿಟಿ-01 ಮೂಲಕ ಸಂಪೂರ್ಣವಾಗಿ ಪರೀಕ್ಷಿಸಲಾಯಿತು. ಇದನ್ನು ಇಸ್ರೋ, ಭಾರತೀಯ ವಾಯುಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಡಿಆರ್‌ಡಿಒ ಒಟ್ಟಾಗಿ ನಡೆಸಿವೆ’ ಎಂದು ಇಸ್ರೋ ಹೇಳಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಎರಡನೇ ಪರೀಕ್ಷಾ ವಾಹನ ಪ್ರದರ್ಶನ ಮತ್ತು ಮಾನವರಹಿತ ಗಗನಯಾನ ಮಿಷನ್‌ಗಳನ್ನು ಕೈಗೊಳ್ಳಲಾಗುವುದು.
ಹಲವು ಮುಂದೂಡಿಕೆಗಳ ಬಳಿಕ ಈ ಏರ್‌ಡ್ರಾಪ್ ಪರೀಕ್ಷೆಯನ್ನು 2024 ಮೇನಲ್ಲಿ ನಿರ್ಧಾರವಾಗಿತ್ತು. ಆದರೆ ಇದರಲ್ಲಿ ಬಳಕೆಯಾಗಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಆದ್ದರಿಂದ ಆ ಪರೀಕ್ಷೆ ಅಲ್ಲಿಗೇ ನಿಂತಿತ್ತು.

