ಕೇಪ್ ಕೆನವೆರಲ್ : 8 ದಿನದ ಕೆಲಸಕ್ಕೆಂದು ತೆರಳಿ ಬಳಿಕ ಅನಿವಾರ್ಯವಾಗಿ ಅಲ್ಲೇ ಸಿಲುಕಿ 9 ತಿಂಗಳಿನಿಂದ ಆತಂಕದ ದಿನ ಎದುರಿಸಿದ್ದ ನಾಸಾದ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬುಧವಾರ ಸುರಕ್ಷಿತವಾಗಿ ಭೂಮಿಗೆ ವಾಪಸಾಗಿದ್ದಾರೆ.
ಈ ಮೂಲಕ ಸುನಿತಾ ಮತ್ತು ಬುಚ್ ಸುರಕ್ಷಿತವಾಗಿ ವಾಪಸಾಗಲಿ ಭಾರತೀಯರೂ ಸೇರಿ ಕೋಟ್ಯಂತರ ಬಾಹ್ಯಾಕಾಶ ಪ್ರೇಮಿಗಳ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಪರಿಶ್ರಮ ಫಲಿಸಿದೆ. ಸುನಿತ್ಸಾ, ವಿಲ್ಲೋರ್ ಜತೆಗೆ ಅಮೆರಿಕದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೊರ್ಬುನೋವ್ ಅವರಿದ್ದ ಸ್ಪೇಸ್‌ಎಕ್ಸ್ ಡ್ಯಾಗನ್ ಗಗನನೌಕೆಯು ಬಾಹ್ಯಾಕಾಶ ಕೇಂದ್ರದಿಂದ ಹೊರಟ 17 ಗಂಟೆಗಳ ಬಳಿಕ ಭೂ ವಾತಾವರಣ ಪ್ರವೇಶಿಸಿತು. ಬಳಿಕ ಫ್ಲೋರಿಡಾದ ಗಲ್ಸ್ ಆಫ್ ಮೆಕ್ಸಿಕೋ ಸಮುದ್ರದಲ್ಲಿ ಸುರಕ್ಷಿತವಾಗಿ ಬುಧವಾರ ಬೆಳಗ್ಗೆ 3.27ಕ್ಕೆ ಬಂದಿಳಿಯಿತು
ಸುದೀರ್ಘ ಅವಧಿಗೆ ಗುರುತ್ವಾಕರ್ಷಣೆ ರಹಿತ ಬಾಹ್ಯಾಕಾಶದಲ್ಲಿದ್ದ ಕಾರಣ ಸಹಜವಾಗಿ ನಡೆಯಲೂ ಆಗದ ಸ್ಥಿತಿಯಲ್ಲಿದ್ದರೂ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ಗಗನನೌಕೆಯಿಂದ ಹೊರಬರುತ್ತಿದ್ದಂತೆ ಸುತ್ತಮುತ್ತ ನೆರೆದಿದ್ದವರಿಗೆ ನಗೆಸೂಸಿ ಕೈ ಬೀಸಿದರು. ಗಗನನೌಕೆಯಿಂದ ಹೊರಬಂದ ಗಗನಯಾತ್ರಿಗಳನ್ನು ಸ್ಟೆಚರ್ ಸಹಾಯದಿಂದ ನೇರವಾಗಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು.

