ರಾಯಚೂರು : ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 354ನೇ ಅರಾಧನಾ ಮಹೋತ್ಸವದ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನದ ಪವಿತ್ರ ಶ್ರೀವಾರಿ ವಸ್ತ್ರವನ್ನು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿಗೆ ಅರ್ಪಿಸಿದರು.
ತಿರುಮಲ ತಿರುಪತಿ ದೇವಸ್ಥಾನದ ಟಿಟಿಡಿ ಎಇಒ ರಾಮಕೃಷ್ಣ ಮಂತ್ರಾಲಯಕ್ಕೆ ತಂದಿದ್ದ ಪವಿತ್ರ ಶ್ರೀವಾರಿ ವಸ್ತವನ್ನು ಮಂತ್ರಾಲಯದ ರಾಯರ ಮಠದ ಅಧಿಕಾರಿಗಳು ಮತ್ತು ಪಂಡಿತರು ಸಕಲ ವಾದ್ಯಗಳ ಮೂಲಕ ಸಾಂಪ್ರದಾಯಿಕವಾಗಿ ಅವರನ್ನು ಮಹಾದ್ವಾರದಿಂದ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು. ಟಿಟಿಡಿ ಅಧಿಕಾರಿಗಳು ಶ್ರೀವಾರಿ ವಸ್ತ್ರಗಳೊಂದಿಗೆ ಮಧ್ವ ಕಾರಿಡಾರ್ ಮೂಲಕ ಮಠಕ್ಕೆ ತೆರಳಿ ಮೊದಲು ಮಂಚಲಮ್ಮ ದೇವಿಗೆ ಸೀರೆ ಅರ್ಪಿಸಿದರು.
ನಂತರ ಟಿಟಿಡಿ ಎಇಒ ರಾಮಕೃಷ್ಣ ಅವರು ಶ್ರೀವಾರಿ ವಸ್ತ್ರವನ್ನು ಮಂತ್ರಾಲಯದ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಶ್ರೀವಾರಿ ವಸ್ತ್ರವನ್ನು ಸ್ವಾಮೀಜಿಯವರು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಿದರು. ನಂತರ, ಟಿಟಿಡಿ ಅಧಿಕಾರಿಗಳು ಶೇಷ ವಸ್ತ್ರ ಪ್ರಸಾದವನ್ನು ಸ್ವಾಮೀಜಿಯವರಿಗೆ ಅರ್ಪಿಸಿದರು. ಪ್ರತಿಯಾಗಿ, ಸ್ವಾಮೀಜಿಯವರು ಟಿಟಿಡಿ ಎಇಒ ರಾಮಕೃಷ್ಣ ಮತ್ತು ಅವರ ಕುಟುಂಬವನ್ನು ಶೇಷ ವಸ್ತ್ರ ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಅಧಿಕಾರಿಗಳಾದ ಎಸ್.ಕೆ. ಶ್ರೀನಿವಾಸರಾವ್, ವೆಂಕಟೇಶ ಜೋಶಿ ಸೇರಿದಂತೆ ಅನೇಕರಿದ್ದರು.

