ನವದೆಹಲಿ : ಭಾರತವು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂದೂರ ನಡೆಸಿದ ಮಾರನೇ ದಿನವಾದ ಗುರುವಾರ ಎರಡೂ ದೇಶಗಳ ನಡುವೆ ಅಧಿಕೃತವಾಗಿಯೇ ಯುದ್ಧ ಆರಂಭವಾಗಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಪಾಕಿಸ್ತಾನ 2 ಸಲ ಭಾರತದ ಮೇಲೆ ದಾಳಿ ಮಾಡಿ ಮಾರುತ್ತರ ನೀಡಲು ಯತ್ನಿಸಿದೆ. ಇದಕ್ಕೆ ಭಾರತ ಕೂಡ ದಿಟ್ಟ ಉತ್ತರ ನೀಡಿ, ತನ್ನ ಸ್ವಯಂರಕ್ಷಣೆ ಮಾಡಿಕೊಂಡು ಪ್ರತಿದಾಳಿ ನಡೆಸಿದೆ. ಈ ಮೂಲಕ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಅಧಿಕೃತವಾಗಿಯೇ ಎರಡೂ ದೇಶಗಳ ನಡುವೆ ಯುದ್ಧ ಶುರುವಾಗಿದೆ ಹಾಗೂ ಒಟ್ಟು 2 ಹಂತಗಳಲ್ಲಿ ಗುರುವಾರ ವಾಯು ಸಂಘರ್ಷ ನಡೆದಿದೆ.
‘ಆಪರೇಶನ್ ಸಿಂದೂರ ಇನ್ನೂ ಮುಗಿ ದಿಲ್ಲ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಹೇಳಿದ್ದಾರೆ. ಅತ್ತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಪಾಕ್ ಸೇನೆಗೆ ಪ್ರತೀಕಾರ ತೀರಿಸಿಕೊಳ್ಳುವ ಅಧಿಕಾರ ನೀಡಿದ್ದಾರೆ. ಹಾಗಾಗಿ ಅಧಿಕೃತವಾಗಿಯೇ ಸಮರ ಆರಂಭವಾದಂತಿದೆ

ಬೆಳಗ್ಗೆ ಒಂದು ಹಂತದ ದಾಳಿ -ಪ್ರತಿದಾಳಿ :
ಗುರುವಾರ ಬೆಳಗ್ಗೆ ಭಾರತವು ಪಾಕಿಸ್ತಾನದಿಂದ ತನ್ನ 15 ನಗರಗಳತ್ತ ಬಂದ ಕ್ಷಿಪಣಿಗಳು ಹಾಗೂ ಡೋನ್‌ಗಳನ್ನು ತನ್ನ ಎಸ್-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆ ಬಳಸಿ ಹೊಡೆ ಮರುಳಿಸಿದೆ. ಇದರ ಬೆನ್ನಲ್ಲೇ ಲಾಹೋರ್ ಸೇರಿದಂತೆ 3 ಪಾಕ್ ನಗರಗಳ ವಾಯುರಕ್ಷಣಾ ವ್ಯವಸ್ಥೆಯನ್ನು ಶಕ್ತಿಶಾಲಿ ಹಾರ್ಪಿ ಡೋನ್ ಪ್ರಯೋಗಿಸಿ ನಾಶ ಮಾಡಿದೆ.
ಸಂಜೆ 2ನೇ ಹಂತದ ದಾಳಿ-ಪ್ರತಿದಾಳಿ
ಇದಾದ ನಂತರ ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾ ರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್, ಜಮ್ಮು- ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ದಾಳಿ ಮಾಡಿದೆ.

