ಬೆಂಗಳೂರು : ಜಾಗತಿಕ ಆಧ್ಯಾತ್ಮಿಕ ಗುರು ಮಾನವತಾವಾದಿ ರವಿಶಂಕರ್ ಗುರೂಜಿ ಅವರು ಡಿ.21 ರಂದು ವಿಶ್ವಸಂಸ್ಥೆಯಲ್ಲಿ ಜಾಗತಿಕ ಧ್ಯಾನ ನಡೆಸಿಕೊಡಲಿದ್ದು ವಿಶ್ವ ಧ್ಯಾನ ದಿನ’ ಘೋಷಣೆ ಆಗಲಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂದು ವಿಶ್ವ ಧ್ಯಾನ ದಿನ’ ಘೋಷಿಸಿ ಸರ್ವಾನುಮತದಿಂದ ಅನುಮೋದಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮ ಮುಂದೆ ಪ್ರತಿ ವರ್ಷ ನಡೆಯಲಿರುವ ಜಾಗತಿಕ ಧ್ಯಾನದ ಆಚರಣೆಯ ಉತ್ಸವಕ್ಕೆ ನಾಂದಿ ಯಾಗಲಿದೆ
ಗುರುದೇವರೊಂದಿಗೆ ವಿಶ್ವ ಧ್ಯಾನ ದಿನ’ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಭಾರತೀಯ ಕಾಲಮಾನ ರಾತ್ರಿ 8.00ಕ್ಕೆ ನಡೆಯಲಿದೆ. ಇದು ಜಗತ್ತಿನಾದ್ಯಂತ ನೇರ ಪ್ರಸಾರವಾಗಲಿದೆ. ಇದಕ್ಕಾಗಿ ನ್ಯೂಯಾರ್ಕ್ ವಿಶ್ವ ಸಂಸ್ಥೆಯ ‘ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಡಿ. 21ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಜ್ಜಾಗುತ್ತಿದೆ. ರವಿಶಂಕರ್ ಗುರೂಜಿ ವಿಶ್ವ ಸಂಸ್ಥೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಪ್ರಮುಖವಾದ ದಿನವನ್ನು ‘ವಿಶ್ವ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ಧ್ಯಾನ’ ಎಂದು ಕರೆಯಲಾಗಿದೆ.
ಈ ಬಗ್ಗೆ ಮಾತನಾಡಿರುವ ಗುರೂಜಿ ವಿಶ್ವ ಸಂಸ್ಥೆಯು, ಧ್ಯಾನವನ್ನು ಗುರುತಿಸಿ ಒಂದು ಮಹತ್ತರ ಹೆಜ್ಜೆಯನ್ನಿಟ್ಟಿದೆ. ಧ್ಯಾನವು ಆತ್ಮವನ್ನು ಪೋಷಿಸುತ್ತದೆ, ಮನಸ್ಸನ್ನು ಪ್ರಶಾಂತಗೊಳಿಸುತ್ತದೆ, ಆಧುನಿಕತೆಯ ಸವಾಲುಗಳಿಗೆ ಪರಿಹಾರ ನೀಡುತ್ತದೆ’ ಎಂದರು.
ಗುರೂಜಿ 43 ವರ್ಷಗಳಿಂದ ಧ್ಯಾನದ ವಿಚಾರವನ್ನು 180 ದೇಶಗಳಲ್ಲಿ ಪಸರಿಸುತ್ತಿದ್ದು, ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸದೃಢತೆ ಮತ್ತು ಸಾಮಾಜಿಕ ಸಾಮರಸ್ಯ ಬೆಳೆಸಲು ಧ್ಯಾನದ ಮಹತ್ವ ಸಾರುತ್ತಿದ್ದಾರೆ.