ಲಕ್ಕೋ : ಅಲಹಾಬಾದ್‌ನ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಬೃಹತ್ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ಎಲ್ಲಾ ಧರ್ಮ, ಸಂಸ್ಕೃತಿ ಮತ್ತು ಮತಗಳ ಸಂಗಮ. ಈ ಅರ್ಥದಲ್ಲಿ ಸನಾತನ ಧರ್ಮ ಭಾರತದ ರಾಷ್ಟ್ರಧರ್ಮ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು, ನಾನು ಈ ಹಿಂದೆಯೂ ಇದೇ ಪದಗಳನ್ನು ಬಳಸಿದ್ದೇನೆ ಎಂದರು. ಸನಾತನ ಧರ್ಮ ಮಾನವೀಯತೆಯ ಧರ್ಮ. ಆರಾಧನಾ ಪ್ರಕ್ರಿಯೆ ವಿಭಿನ್ನವಾಗಿರಬಹುದು. ಆದರೆ ಧರ್ಮ ಒಂದೇ ಮತ್ತು ಆ ಧರ್ಮವೇ ಸನಾತನ ಧರ್ಮ. ಕುಂಭ ಆ ಸನಾತನ ಧರ್ಮದ ಪ್ರತಿನಿಧಿ ಎಂದು ರಾಜ್ಯದ ಪ್ರಮುಖ ಮಠವೊಂದರ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಹೇಳಿದರು.
ನಾಲ್ಕು ವರ್ಷಗಳ ಈ ಕಾರ್ಯಕ್ರಮವನ್ನು ಮಹಾಪರ್ವ ಎಂದು ಕರೆದ ಅವರು, ಜ.14 ರಂದು ಮಕರ ಸಂಕ್ರಾಂತಿಯ ದಿನ ಸುಮಾರು ಆರು ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಒಂದು ಕಾಲದಲ್ಲಿ ಸರಸ್ವತಿ ನದಿಯ ಸಂಗಮವಾಗಿದ್ದ ಪ್ರಯಾಗರಾಜ್ ದೇಶದ ಪವಿತ್ರ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.