2015 ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಾದ್ಯಂತ ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತದೆ.
ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ. ಇದು ದೇಹ ಮತ್ತು ಮನಸ್ಸನ್ನು ಒಳಗೊಂಡಿದೆ. ಯೋಚನೆ ಮತ್ತು ಕ್ರಮ, ನಿಯಂತ್ರಣ ಮತ್ತು ಈಡೇರುವಿಕೆ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ ಯೋಗ. ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ-ಪುರಾಣ ಕಾಲದಿಂದಲೂ ದೇಶದಲ್ಲಿ ಋಷಿಮುನಿಗಳು ಅನುಸರಿಸುತ್ತಾ ಬಂದಿದ್ದಾರೆ
ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೊ ಹಾಗೇ ಆಂತರಿಕ ಸೌಂದರ್ಯವು ಅಷ್ಟೇ ಮುಖ್ಯವಾಗಿರುತ್ತದೆ. ಇವೆರಡನ್ನು ಚೆನ್ನಾಗಿ ಇಟ್ಟುಕೊಳ್ಳಲು ಯೋಗವು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿ ನಿತ್ಯವು ಮನುಷ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ ಎಂದು ಪ್ರಾಚೀನರು ಕಂಡುಕೊಂಡಿದ್ದಾರೆ
ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ.
ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಯೋಗವು ವ್ಯಾಯಮ ಮಾತ್ರವಲ್ಲದೇ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ.
ಯೋಗವು 84 ಲಕ್ಷ ಭಂಗಿಗಳು, 300 ಪ್ರಾಣಾಯಾಮ ತಂತ್ರಗಳು ಮತ್ತು ಹಲವಾರು ಧ್ಯಾನ ವ್ಯಾಯಾಮಗಳನ್ನು ಒಳಗೊಂಡಂತೆ ವ್ಯಾಪಕವಾದ ಪರಂಪರೆಯನ್ನು ಹೊಂದಿದೆ. ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ದಿನಾಚರಣೆ ಆಚರಣೆ ಬಗ್ಗೆ 2014 ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರು ಪ್ರಸ್ತಾಪವನ್ನು ಮಂಡಿಸಿದ್ದರು
ಮೊದಲ ವಿಶ್ವ ಯೋಗ ದಿನದ ದಾಖಲೆ:
ಭಾರತದಲ್ಲಿ ಯೋಗ ದಿನಕ್ಕೆ ಬೇಕಾದ ತಯಾರಿಯನ್ನು ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವ್ಯವಸ್ಥೆ ಮಾಡುತ್ತದೆ. 2015ರ ಜೂ.21ರಂದು ಆಚರಿಸಲಾದ ಮೊಟ್ಟಮೊದಲ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ, 84 ದೇಶಗಳ ಪ್ರತಿನಿಧಿಗಳು ಸೇರಿದಂತೆ 35,985 ಜನರು ನವದೆಹಲಿಯ ರಾಜಪಥ್‌ನಲ್ಲಿ 35 ನಿಮಿಷ 21 ಆಸನಗಳನ್ನು ಪ್ರದರ್ಶಿಸಿದರು. ಇದನ್ನು ವಿಶ್ವದ ಲಕ್ಷಾಂತರ ಜನ ವೀಕ್ಷಿಸಿದರು. ಏಕಕಾಲದಲ್ಲಿ ಇದು ಎರಡು ಗಿನ್ನೆಸ್ ದಾಖಲೆಗಳನ್ನು ಬರೆಯಿತು. ಒಂದೇ ಬಾರಿಗೆ 35,985 ಜನರು ಏಕಕಾಲಕ್ಕೆ ಒಂದೆಡೆ ಯೋಗ ಅಭ್ಯಾಸ ಮಾಡಿದ್ದು ಮೊದಲ ದಾಖಲೆ ಆದರೆ, ಒಂದೇ ಬಾರಿಗೆ 84 ದೇಶದ ಪ್ರತಿನಿಧಿಗಳು ಯೋಗದಲ್ಲಿ ಭಾಗವಹಿಸಿದ್ದು ಮತ್ತೊಂದು ದಾಖಲೆಯಾಯಿತು.ಅಲ್ಲದೇ 2015 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿತ್ತು.
2018ರಲ್ಲಿ ನಡೆದ ನಾಲ್ಕನೇ ಯೋಗ ದಿನಕ್ಕೆ ಶಾಂತಿಗಾಗಿ ಯೋಗ ಎಂದು ನಾಮಕರಣ ಮಾಡಲಾಗಿತ್ತು. ರಾಜಸ್ಥಾನದ ಕೋಟಾದಲ್ಲಿ ನಡೆದ ಕಾರ‍್ಯಕ್ರಮದಲ್ಲಿ 1 ಲಕ್ಷ ಮಂದಿ ಭಾಗವಹಿಸಿ ಯೋಗ ಅಭ್ಯಾಸ ಮಾಡಿದರು. ಇದು ಗಿನ್ನೆಸ್ ದಾಖಲೆ ಸೇರಿತು.
ಜೂನ್ 21 ರಂದೇ ಯೋಗ ದಿನಾಚರಣೆ ಏಕೆ?
ಜೂನ್ 21 ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾತಿ ದಿನವೆಂದು ಅಂದರೆ ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತೆದೆ.
ಇಂದಿನ ಬದಲಾಗುತ್ತಿರುವ ಕಾಲದಲ್ಲಿ ನಾವು ಆರೋಗ್ಯದ ಮೇಲೆ ಗಮನ ಹರಿಸಬೇಕಿದೆ. ಈ ಶಕ್ತಿ ಸಿಗಲು ಯೋಗದಿಂದ ಮಾತ್ರ ಸಾಧ್ಯ ಎಂದು ಸಾರಿದ ನರೇಂದ್ರಮೋದಿ ಅವರ ಆದರ್ಶ ಇಡೀ ವಿಶ್ವಕ್ಕೆ ಮಾದರಿ.
ಸರ್ವರಿಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು