ಅಹಮದಾಬಾದ್ : ಭಾರತದ ನಂ.1 ಹಾಗೂ ಏಷ್ಯಾದ ನಂ.2 ಸಿರಿವಂತ ಉದ್ಯಮಿ ಗೌತಮ್ ಅದಾನಿ ಅವರ ಕಿರಿ ಪುತ್ರ ಜೀತ್ ವಿವಾಹ ಶುಕ್ರವಾರ ನೆರವೇರಿತು. ಸಂಬಂಧಿಕರು, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳ ಮದುವೆಯಾಗುವ ಮೂಲಕ ಜೀತ್ ಅವರು ವಜ್ರ್ಯೋದ್ಯಮಿಯ ಪುತ್ರಿ ದಿವಾ ಶಾ ಜತೆ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ
ಹೀಗೆ ಸರಳವಾಗಿ ಮಗನ ಮದುವೆ ನೆರವೇರಿಸಿರುವ ಗೌತಮ್ ಅದಾನಿ, ಅದರ ಬೆನ್ನಲ್ಲೇ ವಿವಿಧ ಸಾಮಾಜಿಕ ಕಾರ್ಯಗಳಿಗೆ ಭರ್ಜರಿ 10,000 ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅದಾನಿ ದೇವರ ದಯೆಯಿಂದ ಜೀತ್, ದಿವಾ ಮದುವೆ ಸಂಪನ್ನವಾಗಿದೆ. ಇದು ಸಣ್ಣ ಹಾಗೂ ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಅನೇಕ ಹಿತೈಷಿಗಳನ್ನು ಆಮಂತ್ರಿಸಲಾಗಲಿಲ್ಲ ಎಂದು ಬರೆದಿದ್ದಾರೆ.
ಅದಾನಿ ಮಹಾ ದಾನಿ :
ಅದಾನಿ ಕುಟುಂಬದ ಕುಡಿಯ ವಿವಾಹ ಸರಳವಾಗಿ ನಡೆದರೂ, ಹಲವು ಸಾಮಾಜಿಕ ಕಾರ್ಯಗಳಿಗಾಗಿ ಬರೋಬ್ಬರಿ 10 ಸಾವಿರ ಕೋಟಿ. ರು ದೇಣಿಗೆ ನೀಡುವ ಮೂಲಕ ಗೌತಮ್ ಅದಾನಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಈ ಮೊತ್ತವು, ಉದ್ಯಮಿ ಮುಕೇಶ್ ಅಂಬಾನಿ ಪುತ್ರನ ಮದುವೆಯ ವೆಚ್ಚದ ಎರಡರಷ್ಟಿದೆ. ಈ ಹಣವನ್ನು ಜನಸಾಮಾನ್ಯರಿಗಾಗಿ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಾಲೆಗಳು, ಖಚಿತ ಉದ್ಯೋಗಾವಕಾಶ ನೀಡುವ ಜಾಗತಿಕ ಕೌಶಲ್ಯ ಸಂಸ್ಥೆಗಳ ಸ್ಥಾಪನೆ ಯೋಜನೆಗೆ ಮೀಸಲಿಡಲಾಗಿದೆ