ಸುತ್ತಲೂ ಸಮುದ್ರ, ಮಧ್ಯೆ ಇರುವ ಅಂಡಮಾನ್ ದ್ವೀಪ. ಅಲ್ಲೊಂದು ಜೈಲು.15 × 08 ಅಡಿ ಅಳತೆಯ ಕೋಣೆ. ಇಲ್ಲಿ ದಿನವೊಂದಕ್ಕೆ 30 ಪೌಂಡ್ ತೆಂಗಿನ ನಾರನ್ನು ಕೈಯ್ಯಲ್ಲೇ ಗುದ್ದಿ ಬಿಡಿಸಿ ನಾರನ್ನು ತೆಗೆದು ಕೊಡುವ ಕೋಲು ಎನ್ನುವ ಶಿಕ್ಷೆ. ತನ್ಮಧ್ಯೆ ಎಣ್ಣೆ ತೆಗೆಯುವ ಗಾಣಕ್ಕೆ ಮಾನವನನ್ನೇ ಕಟ್ಟಿ ಸುತ್ತಿ ಹಾಕುವ ಚಿಲಕ ಎಂಬ ಶಿಕ್ಷೆ. ಮಲ, ಮೂತ್ರಕ್ಕೂ ಬಿಡುವಿರದ ಇವರಿಗೆ ಊಟ ಎಂದರೇನು..!? ಹುಳಹುಪ್ಪಟೆ ಬೆರೆತ ಬೇಳೆಕಾಳುಗಳ, ಕಾಡುಸೊಪ್ಪಿನ ಊಟ. ಇದೆಲ್ಲಾ ಯಾರ ಕತೆ ….?! ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರ ಸಾವರ್ಕರ್ ರವರ ವೀರಗಾಥೆ.
ವಿನಾಯಕ ದಾಮೋದರ್ ಸಾವರ್ಕರ್!! ಅವಿಸ್ಮರಣೀಯ ವ್ಯಕ್ತಿತ್ವ. ಹೆಸರು ಕೇಳಿದರೇ ಮೈ-ಮನ ರೋಮಾಂಚನ ಯುವಶಕ್ತಿಗೆ ಸ್ಪೂರ್ತಿ. ಮಹಾರಾಷ್ಟ್ರದಲ್ಲಿ ದಾಮೋದರ ಪಂತ್ ಮತ್ತು ಯಶೋದಾ ಬಾಯಿಯವರಿಗೆ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ದೇಶಭಕ್ತಿಯನ್ನೇ ರಕ್ತಗತ ಮಾಡಿಕೊಂಡಿದ್ದ. ಪ್ರಖರವಾದ ಬುದ್ಧಿಮತ್ತೆಯುಳ್ಳ ಸಾವರ್ಕರ್ ಲಂಡನ್ ಗೆ ಬ್ಯಾರಿಸ್ಟರ್ ಪದವಿ ಪಡೆಯುವುದಕ್ಕಾಗಿ ತೆರಳಿದ. ಅಲ್ಲಿ ದೊರಕಿದ ಗೆಳೆಯರು ಆತನ ದೇಶಪ್ರೇಮವೆಂಬ ಅಗ್ನಿಗೆ ಆಜ್ಯವನ್ನು ಸುರಿದರು. ಕ್ರಿ. ಶ.1857ರಲ್ಲಿ ಭಾರತದಲ್ಲಿ ಹೊತ್ತಿ ಉರಿದ ದೇಶಪ್ರೇಮದ ಜ್ವಾಲೆ ವ್ಯವಸ್ಥಿತವಾಗಿ ರೂಪುಗೊಂಡು, ಕ್ರಾಂತಿಯಾಗಿ ಹೊರ ಹೊಮ್ಮಿ ದೇಶವಿಡೀ ಆ ಕ್ರಾಂತಿಯಲ್ಲಿ ಪ್ರಜ್ವಲಿಸಿತು. ಹೆದರಿ ಕಂಗಾಲಾದ ಬ್ರಿಟಿಷ್ ಸರ್ಕಾರ ಅದನ್ನು “ಸಿಪಾಯಿ ದಂಗೆ” ಎಂದು ದಮನಿಸಿತು. ಆದರೆ ಆ ಕ್ರಾಂತಿಯ ಆಮೂಲಾಗ್ರ ಅಧ್ಯಯನ ಮಾಡಿ ಸಾವರ್ಕರ್ ಬರೆದ 1857 ರ ಸ್ವಾತಂತ್ರ್ಯಯುದ್ಧ ಎಂಬ ಪುಸ್ತಕವನ್ನು ಮುದ್ರಿಸಲೇ ಬಿಡಲಿಲ್ಲ ಸರ್ಕಾರ. ಆದರೂ ಆ ಕೈಬರಹದ ಪ್ರತಿ ಅನೇಕ ಪ್ರಮುಖ ಸ್ವಾತಂತ್ರ್ಯ ವೀರರಿಗೆ ಸ್ಫೂರ್ತಿಯಾಯಿತು. ಅವರ ಶಕ್ತಿಯುತ ಆಯುಧವೆಂದರೆ ಅವರ ಲೇಖನಿ. ವೀರ ಸಾವರ್ಕರ್ ಅವರ ನನ್ನ ಜೀವಾವದಿ ಶಿಕ್ಷೆ ಹಾಗೂ 1857- ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೃತಿಗಳು ಪ್ರಸಿದ್ದಿ ಪಡೆದಿದೆ.
ಸಮಸ್ಯೆಯ ಆಳಕ್ಕೆ ಇಳಿದು ಅದಕ್ಕೆ ಸರಳ ಉಪಾಯವನ್ನು ಕಂಡು ಹಿಡಿಯುವ ಚಾಕಚಕ್ಯತೆ ಅವರನ್ನು ನಾಯಕಪಟ್ಟಕ್ಕೆ ಏರಿಸಿತು. ಇವರ ಭಾಷಣ, ಸಂಘಟನಾ ತಂತ್ರ, ಬರಹಗಳಿಗೆ ಬೆದರಿದ ಸರ್ಕಾರ ಇವರ ಮೇಲೆ ಕೊಲೆ ಆಪಾದನೆ ಹಾಕಿ ವಿಚಾರಣೆಯ ನಾಟಕವಾಡಿ ಕರೀನೀರಿನ ಶಿಕ್ಷೆಗಾಗಿ ಅಂಡಮಾನಿಗೆ ಕಳುಹಿಸುತ್ತದೆ. ಅಂತಹ ಕಠಿಣ ಶಿಕ್ಷೆಯೆಡೆಯಲ್ಲೂ ಧೃತಿಗೆಡದೇ ಸಾಹಿತ್ಯ ರಚನೆ ಮಾಡಿದ ಇವರ ಧೀಶಕ್ತಿಗೆ ನಮೋ ನಮಃ. ಕಾಗದ ಲೇಖನಿಗಳನ್ನು ಒದಗಿಸದೇ ಇದ್ದರೂ ಮೊಳೆಯಿಂದಲೇ ಹದಿನಾಲ್ಕು ಸಾವಿರ ಸಾಲುಗಳ ಕವನ ಬರೆದರು.
ಕಾರಾಗೃಹದಿಂದ ಬಿಡುಗಡೆಯಾದ ಮೇಲೆ, ಅದನ್ನು ತನ್ನ ಸ್ಮರಣಾಶಕ್ತಿಯಿಂದ ಪುಸ್ತಕವಾಗಿಸಿದ ಈ ಯೋಗಿಯ ಅಭಿಜಾತ ಪ್ರತಿಭೆಗೆ ನಾವು ತಲೆಬಾಗಲೇಬೇಕು. ಅವರ ಪ್ರಖರ ವ್ಯಕ್ತಿತ್ವ ಅನೇಕ ಪಟ್ಟಭದ್ರ ಹಿತಾಸಕ್ತಿಗಳಿಗೆ ತಲೆನೋವೇ ಆಗಿತ್ತು. ಆದ್ದರಿಂದಲೇ ಅವರು ಕ್ಷಮಾಪಣಾ ಪತ್ರ ಬರೆದು ಜೈಲಿನಿಂದ ಬಿಡುಗಡೆ ಹೊಂದಿದರು ಎಂಬ ಅಪವಾದವನ್ನು ಹೊರಿಸಿದರು. ಆದರೆ ಅದರ ಹಿಂದಿನ ಸತ್ಯಕತೆ ಬೇರೆಯೇ ಇದೆ. ಅದು ರಣತಂತ್ರದ ಒಂದು ಭಾಗವೇ ಆಗಿತ್ತು. ಚರಿತ್ರೆಯ ಪುಟ ತಿರುಗಿಸಿ ಓದಿದರೆ ಈ ಸತ್ಯದ ಅರಿವು ನಮಗಾಗುತ್ತದೆ. ಎಲ್ಲಾದರೂ ಸಿಂಹ ಹುಲ್ಲು ಮೇಯ್ದು ಹೊಟ್ಟೆ ತುಂಬಿಸಲು ಸಾಧ್ಯವೇ ಹೇಳಿ..? ಆದರೆ ಅವರ ಸತತ ಹೋರಾಟದ ಫಲವಾಗಿಯೇ ಕಾಲಾಪಾನಿ ಜೈಲನ್ನೇ ಮುಚ್ಚಲಾಯಿತು. ಎಷ್ಟೋ ಮಂದಿ ಕ್ರಾಂತಿಕಾರೀ ತರುಣರ ಬದುಕು ನಷ್ಟವಾಗುವುದು ನಿಂತಿತು. ಇಷ್ಟಕ್ಕೇ ಇವರ ಗ್ರಹಚಾರ ಮುಗಿಯಲಿಲ್ಲ. ಸ್ವಾತಂತ್ರ್ಯ ನಂತರವೂ ಇವರಿಗೆ ಬಂದ ಸಂಕಷ್ಟಗಳು ಅವರನ್ನು ಜರ್ಜರಿತಗೊಳಿಸಿತು. ಕೊನೆಗೆ ಆತ್ಮಾರ್ಪಣಾ ವ್ರತವನ್ನು ಆಚರಿಸಿ ಫೆಬ್ರವರಿ 26 ರಂದು ಹರಿಪಾದವನ್ನು ಸೇರಿದರು.
ಮಾನ- ಅವಮಾನ, ನಿಂದೆ- ಹೊಗಳಿಕೆ ಎಲ್ಲವನ್ನು ಅನುಭವಿಸುತ್ತಾ ಅದನ್ನೇ ತಾಯಿ ಭಾರತಿಗೆ ಅರ್ಪಿಸುತ್ತಾ ಬಾಳಿದ ಈ ಕರ್ಮಯೋಗಿಗೆ *ಸ್ವತಂತ್ರ ಭಾರತವೇ ವೈಜಯಂತಿ ಮಾಲೆ, ಭಾರತೀಯರ ಸ್ವಾಭಿಮಾನ, ಏಳಿಗೆಯೇ ಅವರಿಗೆ ಸನ್ಮಾನ.*ಹಿಂದುತ್ವದ ಬಗ್ಗೆ ಇವರು ತೆಗೆದುಕೊಂಡ ನಿಲುವುಗಳು ಈಗಲೂ ಯುವಜನತೆಗೆ ಸ್ಪೂರ್ತಿದಾಯಕ. ಅಬ್ಬಬ್ಬಾ…!! ಅವರ ಬದುಕಿನ ಪುಟಗಳನ್ನು ತೆರೆದು ನೋಡಿದರೆ ಮೈ ನವಿರೇಳುತ್ತದೆ. ಮನ ಭಾವನೆ ತುಂಬಿ ಬಾಗುತ್ತದೆ. ಇವರು ನಮ್ಮವರು ಎಂಬ ಹೆಮ್ಮೆಯಿಂದ ಹೃದಯ ಹಿಗ್ಗುತ್ತದೆ.
ಓ ವೀರ ಸಾವರ್ಕರ್ ! ನಿನ್ನಾತ್ಮಕ್ಕೆ ಶಾಂತಿ ಕೊಡುವ ಸೌಭಾಗ್ಯ ನಮ್ಮ ಪೀಳಿಗೆಯಿಂದಾಗಲಿ. ಹರಸು ನಮ್ಮನ್ನು
ಮಹಾನ್ ನಾಯಕ, ಮಹಾನ್ ವಾಗ್ಮಿ ಹಾಗೂ ಅಪ್ರತಿಮ ದೇಶಭಕ್ತ,ಪ್ರಖರ ಬರಹಗಾರ, ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ಬಲಿಕೊಟ್ಟ ವೀರ ಸಾವರ್ಕರ್ ಅವರಿಗೆ ಭಾವಪೂರ್ಣ ನಮನಗಳು
ಸ್ವರ್ಣಾ ಕುಂದಾಪುರ