ವಿಜಯದಶಮಿ ಭಾರತೀಯ ಸಂಸ್ಕೃತಿಯ ವೀರತ್ವ ಮತ್ತು ಶೌರ್ಯತ್ವದ ಉಪಾಸನೆ ಮಾಡುವ ಹಬ್ಬವಾಗಿದೆ. ವ್ಯಕ್ತಿ ಮತ್ತು ಸಮಾಜದ ಜನರ ರಕ್ತದಲ್ಲಿ ವೀರತೆ ಹೊಮ್ಮಲೆಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ರಾಮ ರಾವಣನನ್ನು ಇದೇ ದಿನ ವಧಿಸಿದನು. 9 ದಿನ ದುರ್ಗಾ ಪೂಜೆಯನ್ನು ಮಾಡಿ ಆನಂತರ ರಾವಣನನ್ನು ವಧಿಸಿದನೆಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ ರಾಜರು ಇಂದಿನ ದಿನ ವಿಜಯದ ಪ್ರಾರ್ಥನೆಯೊಂದಿಗೆ ದಂಡಯಾತ್ರೆಗೆ ಹೊರಡುತ್ತಿದ್ದರು. ಹತ್ತು ಪ್ರಕಾರದ ಪಾಪಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಅಹಂಕಾರ ಆಲಸ್ಯ ಹಿಂಸೆ ಮತ್ತು ಕಳ್ಳತನವನ್ನು ತ್ಯಾಗ ಮಾಡಲು ಪ್ರೇರಣೆ ಕೊಡುವ ಹಬ್ಬ ವಿಜಯದಶಮಿ. ಭಾರತ ಕೃಷಿ ಪ್ರಧಾನ ದೇಶ. ರೈತ ತನ್ನ ಗದ್ದೆಗಳಲ್ಲಿ ಬೆಳೆದ ಧಾನ್ಯರೂಪಿ ಸಂಪತ್ತನ್ನು ಮನೆಗೆ ತಂದು ಹರ್ಷೋಲ್ಲಾಸದಿಂದ ಭಗವಂತನಿಗೆ ಕೃತಜ್ಞತೆ ಅರ್ಪಿಸುವ ದಿನ ವಿಜಯದಶಮಿ. ಶಕ್ತಿಪೂಜೆ, ಶಸ್ತ್ರ ಪೂಜೆ, ವಿಜಯ ಮತ್ತು ಸಂಭ್ರಮೋಲ್ಲಾಸದ ಹಬ್ಬ ವಿಜಯದಶಮಿ.ಶಕ್ತಿಯ ಉಪಾಸನೆಯನ್ನು ಶಾರದೇಯ ನವರಾತ್ರಿ ಪ್ರತಿಪದೆಯಿಂದ ನವಮಿಯ ತನಕ 9 ತಿಥಿ, 9ನಕ್ಷತ್ರ, 9 ಶಕ್ತಿಗಳನ್ನು ನವಧಾ ಭಕ್ತಿಯಿಂದ ಸನಾತನ ಕಾಲದಿಂದ
ಆಚರಿಸಲಾಗುತ್ತಿದೆ.ಭಾರತೀಯ ಸಂಸ್ಕೃತಿ ವೀರತೆ ಮತ್ತು ಶೌರ್ಯದ ಪ್ರತೀಕವಾದುದರಿಂದ ವಿಜಯದಶಮಿಯ ದಿನ ಶಸ್ತ್ರಾಸ್ತ್ರಗಳ ಪೂಜೆಯನ್ನೂ ನೆರವೇರಿಸಲಾಗುತ್ತದೆ.
ವಿಜಯದಶಮಿಯ 10 ಸೂತ್ರಗಳು
ದಸರಾ 10 ಇಂದ್ರಿಯಗಳ ಮೇಲೆ ವಿಜಯದ ಹಬ್ಬ.
ಅಸತ್ಯದ ವಿರುದ್ಧ ಸತ್ಯದ ವಿಜಯ
ಬಹಿರ್ಮುಖತೆಯ ವಿರುದ್ಧ ಅಂತರ್ಮುಖತೆಯ ವಿಜಯ
ಅನ್ಯಾಯದ ವಿರುದ್ಧ ನ್ಯಾಯದ ವಿಜಯ
ದುರಾಚಾರದ ವಿರುದ್ಧ ಸದಾಚಾರದ ವಿಜಯ
ತಮೋಗುಣದ ವಿರುದ್ಧ ಸತ್ವ ಗುಣದ ವಿಜಯ
ದುಷ್ಕರ್ಮದ ವಿರುದ್ಧ ಸತ್ಕರ್ಮದ ವಿಜಯ
ಭೋಗದ ವಿರುದ್ಧ ಯೋಗದ ವಿಜಯ
ಅಸುರತ್ವದ ವಿರುದ್ಧ ದೈವತ್ವದ ವಿಜಯ
ಜೀವತ್ವದ ವಿರುದ್ಧ ಶಿವತ್ವದ ವಿಜಯ.
ಈ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗೋಣ.
ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು
ಸ್ವರ್ಣ ಕುಂದಾಪುರ