ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಎರಡು ದಿನಗಳಿರುವಾಗಲೇ ಸಾರ್ವಜನಿಕರಿಗೆ ಚಿತ್ರಗಳ ಮೂಲಕ ಮಂದಸ್ಮಿತ ಬಾಲರಾಮನ ದರ್ಶನವಾಗಿದೆ. ಕೃಷ್ಣಶಿಲೆಯಲ್ಲಿ ಮೂಡಿರುವ ರಾಮಲಲಾನ ವಿಗ್ರಹದ ಮೊದಲ ಚಿತ್ರ ಶುಕ್ರವಾರ ಸಾರ್ವಜನಿಕವಾಗಿ ಬಿಡುಗಡೆಯಾಗಿದ್ದು, ರಾಮಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಗುರುವಾರ ಮಧ್ಯಾಹ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ವೇದಮಂತ್ರ ಪಠಣದೊಂದಿಗೆ ಪ್ರತಿಷ್ಠಾಪನೆಗೊಂಡಿರುವ ರಘುನಂದನ ಮಂದಹಾಸ ವದನನಾಗಿರುವ, ಮುಗ್ಧತೆಯೇ ಮೈದಳೆದಿರುವ ಬಾಲರಾಮನ ಚಿತ್ರ ಭಕ್ತರನ್ನು ಭಾವಪರಶರನ್ನಾಗಿಸಿದೆ.
ಕೃಷ್ಣ ಶಿಲೆಯಲ್ಲಿ ಕೆತ್ತನೆಯಾಗಿರುವ ನಿಂತಿರುವ ಭಂಗಿಯಲ್ಲಿರುವ ರಾಮಲಲಾನ ವಿಗ್ರಹದ ಕಣ್ಣುಗಳಿಗೆ ಹಳದಿ ವಸ್ತ್ರಸುತ್ತಲಾಗಿದ್ದು ಕೆಂಪು ಗುಲಾಬಿ ಹಾರದಿಂದ ಅಲಂಕರಿಸಲಾಗಿರುವ ಚಿತ್ರವನ್ನು ವಿಶ್ವ ಹಿಂದು ಪರಿಷತ್ ಬಿಡುಗಡೆ ಮಾಡಿದೆ. ಈ ಚಿತ್ರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ವೈರಲ್ ಆಗುವುದರೊಂದಿಗೆ ಸಾಕಷ್ಟು ಸಂಚಲನ ಮೂಡಿಸಿದೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕೂಡ ಬಾಲರಾಮನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ. ಅದೇ ರೀತಿ ದೇಶ, ವಿದೇಶದಲ್ಲಿರುವ ರಾಮ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ರಾಮಲಲಾನ ಚಿತ್ರವನ್ನು ಡಿಪಿ, ಸ್ಟೇಟಸ್‌ನಲ್ಲಿ ಹಾಕಿಕೊಂಡು ಭಕ್ತಿ ಮೆರೆದಿದ್ದಾರೆ