ಉಡುಪಿ : ಭಗವಂತನಿಗೆ ನಮ್ಮಿಂದ ಏನಾಗಬೇಕಿಲ್ಲ ಭಗವಂತನಿಗೆ ತುಂಬ ಪ್ರಿಯವಾದ ಗೀತೆಯ ಅಧ್ಯಯನ ಹಾಗೂ ಗೀತಾ ಬೋಧೆಯ ಅನುಸರಣೆಯನ್ನು ಮಾತ್ರ ಆತ ನಮ್ಮಿಂದ ಬಯಸುತ್ತಾನೆ. ಗೀತೆ ಓದಿದವರು ಭಗವಂತನ ಪ್ರೀತಿಗೆ ಪಾತ್ರವಾಗುತ್ತಾರೆ ಗೀತೆ ಓದದವ ಭೂಭಾರ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣ ಮಾಸೋತ್ಸವ ಸಂದರ್ಭದ ಶ್ರೀಕೃಷ್ಣ ಸಪ್ಪೋತ್ಸವದಲ್ಲಿ ಶನಿವಾರ ನಡೆದ ಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಾನವನ ಉದ್ಧಾರಕ್ಕಾಗಿ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಕೊಂಡಲ್ಲಿ ಜೀವನ ಸಾರ್ಥಕ.ಗೀತೆ ಜೀವನಕ್ಕೆ ಗೈಡ್ ಇದ್ದಂತೆ. ಗೀತೆಯ ಅಧ್ಯಯನ ಸಾರ್ಥಕ ಜೀವನಕ್ಕೆ ಕಾರಣವಾಗುತ್ತದೆ ಎಂದರು.ಸಮಾಜ ವಿಘಟನೆಯಲ್ಲಿ ಕಾರ್ಯ ಸಾಧಿಸುವವರೇ ಹೆಚ್ಚಿರುವ ಈ ಸಂದರ್ಭದಲ್ಲಿ ಪರಸ್ಪರ ಗೌರವಿಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಾಜ ಸನ್ಮಾನ ಕಾರ್ಯಕ್ರಮವನ್ನು ನಮ್ಮ ಪರ್ಯಾಯದಲ್ಲಿ ಹಮ್ಮಿಕೊಂಡಿರುವುದಾಗಿ ಶ್ರೀಪಾದರು ತಿಳಿಸಿದರು.