ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ.1 ರಿಂದ ಆರಂಭಗೊಂಡ ವೈಭವದ ಶ್ರೀಕೃಷ್ಣ ಮಾಸೋತ್ಸವ ಸೆ.1 ರಂದು ಸಮಾಪನಗೊಳ್ಳಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರ ನೇತೃತ್ವದಲ್ಲಿ ಕಿರಿಯ ಶ್ರೀ ಸುಶೀಂದ್ರ ತೀರ್ಥರು ಒಡಗೂಡಿ ನಡೆಸಿದ ಈ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಸಮಾರೋಪ ಸಮಾರಂಭ ಅಂಗವಾಗಿ ಶ್ರೀಕೃಷ್ಣನಿಗೆ ನಾಳೆ ಸೆ.1 ರಂದು ಉದಯಾಸ್ತಮಾನ ಸೇವೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ಉಡುಪಿ ವಲಯ ‘ ಹಾಗೂ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಲಕ್ಷ ತುಳಸಿ ಅರ್ಚನೆ . ಹಾಗೂ ಶ್ರೀ ವಿಷ್ಣು ಸಹಸ್ರ ನಾಮಾವಳಿ ಪಠಣ ನಡೆಯಲಿದೆ.ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭ ಸಂಜೆ 5.00 ರಿಂದ ರಾಜಾಂಗಣದಲ್ಲಿ ನಡೆಯಲಿದ್ದು, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಭ್ಯಾಗತರಾಗಿ ಆಗಮಿಸುವರು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮತ್ತು ಪ್ರತಾಪಸಿಂಹ ನಾಯಕ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅತಿಥಿಗಳಾಗಿ ಆಗಮಿಸುವರು.
ಅಂದು ಬೆಳಿಗ್ಗೆ 10.00 ರಿಂದ 12.00 ರವರೆಗೆ ವಿದುಷಿ ಸಾದ್ವಿನಿ ಕೊಪ್ಪ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಲಾಗಿದೆ. ಅಪರಾಹ್ನ 3:00ರಿಂದ 5:00 ರವರೆಗೆ ಸಂಯುಕ್ತ ಸಂಸ್ಥಾನ (ಯು.ಕೆ) ನೃತ್ಯ ನಿರ್ದೇಶಕಿ ದಿವ್ಯಾ ಭಟ್ ಅವರಿಂದ ಕಥಕ್ ನೃತ್ಯ ಹಾಗೂ ಸಂಜೆ 7:00 ರಿಂದ 9:00 ರವರೆಗೆ ಸ್ವೀಡನ್ನ ವಿದುಷಿ ದಿವ್ಯಾ ಸುರೇಶ್ ಅವರಿಂದ ಭರತ ನಾಟ್ಯ ಪ್ರದರ್ಶನವಿದೆ.ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿಯ ಹರೀಶ್ ಭಟ್ ಮತ್ತು ಪ್ರಭಾಕರ ಅಡಿಗ ಮಂಗಳೂರು ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.