Home » ಸಂಭ್ರಮ ಸಡಗರದ ಮಹಾ ಶಿವರಾತ್ರಿ
 

ಸಂಭ್ರಮ ಸಡಗರದ ಮಹಾ ಶಿವರಾತ್ರಿ

by Kundapur Xpress
Spread the love

ಮಹಾ ಶಿವರಾತ್ರಿ ಮಾಘ ಮಾಸದ ಕೃಷ್ಣ ಪಕ್ಷದ ಬಹುಳ ಚತುರ್ದಶಿಯ ದಿನ ಆಚರಿಸಲಾಗುತ್ತದೆ ದಿನವಿಡೀ ಪೂಜೆ ಉಪವಾಸ ಜಾಗರಣೆ ಮಾಡಿ ಪರಮ ಶಿವನನ್ನು ಆರಾಧಿಸುವ ಸಂಪ್ರದಾಯವೇ ಮಹಾ ಶಿವರಾತ್ರಿ

ಭಾರತದಲ್ಲಿ ವರ್ಷಕ್ಕೆ 365 ಹಬ್ಬಗಳಿದ್ದವು. ಆಮೇಲೆ 30-60 ಹಬ್ಬಗಳಾಯಿತು. ಅದು ಕುಸಿದು ಈಗ 5-6 ಹಬ್ಬಗಳನ್ನು ಆಚರಿಸುವುದೇ ಕಷ್ಟವಾಗಿದೆ. ಸೌರಮಂಡಲವನ್ನು ಆಧರಿಸಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಮಾನವನ ಶರೀರವನ್ನು ಮಾಡಲು ಸೌರಮಂಡಲ ಕುಂಬಾರನಂತೆ ಕೆಲಸ ಮಾಡುತ್ತದೆ. ಪಂಚಭೂತಗಳಿಂದಾದ ಶರೀರ ಪಂಚಭೂತಗಳಲ್ಲೇ ಲೀನವಾಗುತ್ತದೆ

ಉಪವಾಸ ಎಂದರೆ, ಉಪ = ಹತ್ತಿರವಾಸ = ಇರುವುದು. ಉಪವಾಸ ಅಂದರೆ ಸಾನಿಧ್ಯ ಅಂತ. ಭಗವಂತನ ಸಮೀಪವಿದ್ದು ಧ್ಯಾನ ಮಾಡುವುದು. ಮನಸೆಂಬ ಮರ್ಕಟವನ್ನು ಭಗವಂತನ ಸಾನಿಧ್ಯದಲ್ಲಿ ತಂದು ನಿಲ್ಲಿಸುವುದೇ ಉಪವಾಸ.

ಶಿವರಾತ್ರಿ ಶಿವನ ಹಬ್ಬ. ಶಿವನ ಭಕ್ತರಾದ ನಮ್ಮೆಲ್ಲರ ಹಬ್ಬ. ಪರಮಶಿವನಿಗೆ ಪೂಜೆ ಮಾಡಲು ರಾಹುಕಾಲ ಗುಳಿಕಕಾಲ ಅಂತೇನಿಲ್ಲ, ಬೆಳಗ್ಗೆಯಿಂದ ಶುಚಿರ್ಭೂತರಾಗಿ ಭಯದಿಂದ ಅಲ್ಲ ಭಕ್ತಿಯಿಂದ ಪೂಜೆ ಮಾಡಬೇಕು.

4 ಯಾಮಗಳಲ್ಲಿ ಪೂಜೆ ಮಾಡಿ ಉಪವಾಸವಿದ್ದು ಜಾಗರಣೆ ಮಾಡಬೇಕು. ಕತ್ತಲು, ಅಂಧಕಾರ ಮತ್ತು ಅಜ್ಞಾನದ ಮೇಲೆ ಹತೋಟಿ ಸಾಧಿಸಲು ಪ್ರಕಾಶ ಮತ್ತು ಸೃಜನಶೀಲತೆಯನ್ನು ಸೃಷ್ಟಿಸಲು ಮೌನವಾದ ಜಾಗರಣೆ ಮಾಡಲಾಗುತ್ತದೆ. ಮಾರನೇ ದಿನ ಹಗಲಿನಲ್ಲಿ ಮಲಗಬಾರದು.ಎಲ್ಲಾ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಲಾಗುತ್ತದೆ. ಆದರೆ ಶಿವರಾತ್ರಿಯನ್ನು ರಾತ್ರಿ ಸಮಯದಲ್ಲಿ ಆಚರಿಸಲಾಗುತ್ತದೆ. ರಾತ್ರಿ ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಆ ಶಿವನನ್ನು ಬೇಡುವ ದಿನವೇ ಶಿವರಾತ್ರಿ.

ಸಮುದ್ರ ಮಥನದಲ್ಲಿ ಕ್ಷೀರ ಸಮುದ್ರವನ್ನು, ಶೇಷನಾಗನನ್ನು ಹಗ್ಗವಾಗಿಯೂ, ಮಂದಾರ ಪರ್ವತವನ್ನು ಕಡಗೋಲಿನಂತೆಯೂ ಬಳಸಿ ದೇವತೆಗಳು ಹಾಗೂ ಅಸುರರು ಮಥಿಸಿದರು. ವಿಷ್ಣು ಕೂರ್ಮಾವತಾರದಲ್ಲಿ ನಿಂತು ಮಂದಾರ ಪರ್ವತಕ್ಕೆ ಆಧಾರವಾಗಿ ನಿಂತ. ಒಳ್ಳೆಯದೂ ಬಂತು ಕೆಟ್ಟದೂ ಬಂತು ಕಾರ್ಕೋಟಕ ವಿಷ ಬಂದಾಗ ಅದು ಮೂರು ಲೋಕಗಳನ್ನು ಸುಟ್ಟುಬಿಡುವಷ್ಟು ಭಯಂಕರವಾಗಿತ್ತು.

ಆ ಹಾಲಾಹಲವನ್ನು ನಿಯಂತ್ರಿಸುವುದು ಯಾರು? ಅದರ ಪ್ರಭಾವವನ್ನು ನಿಗ್ರಹಿಸುವುದು ಯಾರು? ದೇವತೆಗಳಿಗೂ, ರಾಕ್ಷಸರಿಗೂ ನೆನಪಾಗಿದ್ದು ಆದಿದೇವ- ಮಹಾದೇವ- ಪರಮಶಿವ. ಕಾಪಾಡು ಎಂದು ಮೊರೆ ಇಟ್ಟ ತಕ್ಷಣ ಯಾವುದನ್ನು ಯೋಚಿಸದೆ ಕುಡಿದೇ ಬಿಟ್ಟ. ಎಲ್ಲರೂ ನಿಶ್ಚೇತನರಾಗಿ ನೋಡುತ್ತಾ ನಿಂತು ಬಿಟ್ಟರು. ಮಹಾಶಕ್ತಿ ಶಿವನ ಈ ಕಾರ್ಯ ನೋಡಿ ಓಡೋಡಿ ಬಂದು ಅವನ ಕುತ್ತಿಗೆ ಪಾರ್ವತಿ ಹಿಡಿದುಬಿಟ್ಟಳು. ಕಾರ್ಕೋಟಕ ವಿಷ ಹೊಟ್ಟೆಗೆ ಹೋಗದೆ ಗಂಟಲಲ್ಲೇ ಉಳಿಯಿತು‌. ಗಂಟಲು ನೀಲಿಯಾಗಿ ನೀಲಕಂಠ ಎಂಬ ಹೆಸರು ಬಂತು. ಆ ದಿನ ಚತುರ್ದಶಿ ಆಗಿತ್ತು, ಎಲ್ಲರೂ ಅವನನ್ನು ಭಜಿಸಿ ಪೂಜಿಸಿದರು. ಅಂದಿನಿಂದ ಶಿವರಾತ್ರಿಯನ್ನು ಆಚರಿಸಲಾಗುತ್ತದೆ

ಸ್ವರ್ಣ ಕುಂದಾಪುರ

   

Related Articles

error: Content is protected !!