ಶ್ರೀ ಮೈಲಾರೇಶ್ವರ ದೇವಸ್ಥಾನ, ಚಿಕ್ಕನ್‍ಸಾಲ್ ರಸ್ತೆ, ಕುಂದಾಪುರ
ಕುಂದಾಪುರದ ಚಿಕ್ಕನ್‍ಸಾಲ್ ರಸ್ತೆಯ ಮಧ್ಯಭಾಗದಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನವು ಸುಮಾರು 800 ವರ್ಷಗಳ ಪುರಾತನ ಇತಿಹಾಸವನ್ನು ಹೊಂದಿದೆ. 1950-60ರ ದಶಕದಲ್ಲಿ ಈ ದೇವಸ್ಥಾನವು “ಮೈಲಾರ ಮಠ” ಎಂದೇ ಕರೆಯಲ್ಪಡುತ್ತಿತ್ತು. 1960ರ ದಶಕದಲ್ಲಿ ಶ್ರೀ ಮೈಲಾರೇಶ್ವರ ದೇವಸ್ಥಾನವು ಜೀರ್ಣಾವಸ್ಥೆಯಲ್ಲಿದ್ದು, ಇಲ್ಲಿ ಪೂಜೆ ಪುನಸ್ಕಾರಗಳ ಕೊರತೆಯನ್ನು ಮನಗಂಡ ಈ ಪರಿಸರದ ಹಲವು ಯುವಕರು ಹಾಗೂ ಸಮಾನ ಮನಸ್ಕರು ಒಂದು ಒಕ್ಕೂಟವನ್ನು ರಚಿಸಿಕೊಂಡರು.
ತದನಂತರದಲ್ಲಿ ದೇವಸ್ಥಾನದಲ್ಲಿ ಭಜನೆ, ಸೋಣೆಪೂಜೆ ಹಾಗೂ ಹೂವಿನಪೂಜೆ ಮುಂತಾದ ಅನೇಕ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆದು ಬಂದವು. 1995ರಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ 1995-96ರಲ್ಲಿ ದೇವಸ್ಥಾನದ ಪುನರ್‍ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವವು ಡಾ|| ಎಮ್.ವಿ. ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.