ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೆದ್ದಾರಿಯಿಂದ ಪೂರ್ವಕ್ಕೆ ಕುಂಭಾಸಿ ಕ್ಷೇತ್ರದಲ್ಲಿ ಆನೆಗುಡ್ಡೆಯಿದೆ. ಕುಂಭಾಸಿಯು ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದ್ದು ಇಲ್ಲಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಅತೀ ಪುರಾತನವಾಗಿದ್ದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ನಿತ್ಯವೂ ಯಾತ್ರಾರ್ಥಿಗಳಾಗಿ ಬಂದು ಶ್ರೀ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿಸಿಕೊಂಡು ಇಷ್ಟಾರ್ಥವನ್ನು ಪಡೆದು ಕೃತಾರ್ಥರಾಗುತ್ತಾರೆ.
ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧುಕಾನನವೆಂದೂ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರವೆಂದೂ, ಕಲಿಯುಗದಲ್ಲಿ ಕುಂಭಾಸಿಯೆಂದೂ ಕರೆಯುತ್ತಾರೆ. ಈ ಕ್ಷೇತ್ರವು ಅನಾವೃಷ್ಟಿಯಿಂದ ಪೀಡಿತವಾದಾಗ ಗೌತಮ ಮುನಿಗಳು ಇಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದರು. ಹೀಗೆ ಈ ಕ್ಷೇತ್ರವು ಯುಗಾಂತರಗಳಿಂದಲೂ ಪವಿತ್ರವಾದುದು ಎಂದು ಪುರಾಣಗಳು ಸಾರುತ್ತವೆ.
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಾದಿಗಳಿಗೆ ಭಂಗ ಬರತೊಡಗಿತು. ವನವಾಸ ನಿರತರಾದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮಜನಿಗೆ ಕುಂಭಾಸುರನ ಪೀಡೆಯನ್ನು ಅರುಹಿದಾಗ ಧರ್ಮರಾಜನು ಲೋಕಕಂಟಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಅಪ್ಪಣೆ ಕೊಟ್ಟನು.
ಭೀಮಸೇನನು ಯುದ್ಧ ಸನ್ನದ್ಧನಾದನು. ಭೀಮ, ಕುಂಭಾಸುರರಿಗೆ ಭೀಕರ ಯುದ್ದ ನಡೆಯಿತು. ಯುದ್ಧದಲ್ಲಿ ಕುಂಭಾಸುರನು ಅವಧ್ಯನಾಗಿಯೇ ಉಳಿದನು. ಅವನನ್ನು ಸಂಹರಿಸುವ ಬಗ್ಗೆ ಚಿಂತಿಸುತ್ತಾ ಭೀಮಸೇನನು ಶಿಬಿರಕ್ಕೆ ಹಿಂದಿರುಗುತ್ತಿರುವಾಗ ವಿಶ್ವೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ವಧ್ಯನು ಎಂಬ ಅಶರೀರವಾಣಿಯನ್ನು ಕೇಳಿ ಭೀಮಸೇನನು ವಿಶ್ವಂಭರ ರೂಪಿ ಪರಮಾತ್ಮನನ್ನು ಧ್ಯಾನಿಸಿ ಆನೆಯ ರೂಪದಿಂದ ಭಗವಂತನು ನೀಡಿದ ಕತ್ತಿಯಿಂದ ಅಸುರನನ್ನು ಸಂಹರಿಸಿದನೆಂದು ಐತಿಹ್ಯ ಉಂಟು. ಇದನ್ನೇ ಶ್ರೀ ವಾದಿರಾಜ ಯತಿವರೇಣ್ಯರು ತೀರ್ಥ ಪ್ರಬಂಧ ಗ್ರಂಥದಲ್ಲಿ ಭೀಮಸೇನನು ಕುಂಭಾಸುರನಿಗೆ ಕತ್ತಿ (ಅಸಿ)ಯಿಂದ ಸಂಹರಿಸಿದ ಕಾರಣ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ
ಈ ಆನೆಗುಡ್ಡೆ ಕ್ಷೇತ್ರದಲ್ಲಿ ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆನೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಸೊಂಡಿಲಿನ ಆಕಾರವಿರುವ ಮುಖ ಭಾಗಕ್ಕೆ ಮಾತ್ರ ನಿತ್ಯ ಪೂಜಾದಿಗಳು, ವಿನಿಯೋಗಾದಿಗಳು ನಡೆಯುತ್ತವೆ. ಉಳಿದ ಭಾಗಗಳು ವಿಧ್ಯುಕ್ತವಾಗಿ ಗೋಡೆಯಿಂದ ಅವೃತವಾಗಿವೆ.
ಪೂಜಾ ವಿನಿಯೋಗಾದಿಗಳು
ದೇವಾಲಯದಲ್ಲಿ ಬೆಳಗ್ಗೆ 5.00 ಗಂಟೆಗೆ, ಮಧ್ಯಾಹ್ನ 1.00 ಗಂಟೆಗೆ, ರಾತ್ರಿ 8.30ಕ್ಕೆ ತ್ರಿಕಾಲದಲ್ಲಿ ಪೂಜೆ ನಡೆಯುತ್ತದೆ. ಬೆಳಗ್ಗೆ 6.00 ರಿಂದ ರಾತ್ರಿ 9.00ರ ತನಕ ಅವಿರತವಾಗಿ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ದೇವಾಲಯ ಮುಕ್ತವಾಗಿರುತ್ತದೆ. ವಾರದಲ್ಲಿ ಆದಿತ್ಯವಾರ, ಮಂಗಳವಾರ, ಶುಕ್ರವಾರ ಹಾಗೂ ಸಂಕ್ರಮಣ, ಸಂಕಷ್ಟಹರ ಚತುರ್ಥಿ ಹಾಗೂ ಗಣೇಶ ಚತುರ್ಥಿ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ.
ಮಾರ್ಗಶಿರ ಶುದ್ದ ಚತುರ್ಥಿಯಂದು ವಾರ್ಷಿಕ ರಥೋತ್ಸವ ನಡೆಯುತ್ತದೆ. ಪರವೂರಿನಿಂದ ಬಂದ ಭಕ್ತಾದಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯಿದೆ. ತಂಗಲು ಅತಿಥಿ ಗೃಹಗಳ ಸೌಲಭ್ಯಗಳಿವೆ. ಇಲ್ಲಿಯ ಸೇವೆಗಳಲ್ಲಿ ಸತ್ಯಗಣಪತಿ ವ್ರತ, ಗಣಹೋಮ ಮತ್ತು ರಂಗಪೂಜೆ ವಿಶೇಷವಾಗಿ ನಡೆಯುತ್ತದೆ.
ಸತ್ಯಗಣಪತಿ ವ್ರತ ಸೇವೆಯನ್ನು ಇಷ್ಟಾರ್ಥವನ್ನು ಶೀಘ್ರದಲ್ಲಿ ನೆರವೇರಿಸಲು ಭಕ್ತಾದಿಗಳು ಮಾಡಿಸುತ್ತಾರೆ. ಮುಖ್ಯವಾಗಿ ವಿವಾಹ ಕಾರ್ಯ ನೆರವೇರಿಸಲು ಈ ಸೇವೆಯನ್ನು ಸಲ್ಲಿಸುತ್ತಾರೆ.
ತಮ್ಮ ಜಾತಕದಲ್ಲಿರತಕ್ಕ ಯಾವುದೇ ಗ್ರಹಗಳ ದೋಷ ನಿವಾರಣೆಗಾಗಿ ಹಾಗೂ ಶ್ರೇಯಸ್ಸಿಗಾಗಿ ಗಣಹೋಮ ಸೇವೆಯನ್ನು ಸಲ್ಲಿಸುತ್ತಾರೆ. ರಂಗಪೂಜೆ, ದೀಪಾರಾಧನೆ ಸಹಿತವಾಗಿ ನಡೆಯುವ ಸೇವೆಯಾಗಿದ್ದು ಈ ಸೇವೆಯಿಂದ ಶ್ರೀ ದೇವರು ತಮ್ಮ ದೈನಂದಿನ ಕಾರ್ಯಗಳಿಗೆ ಒದಗುವ ವಿಘ್ನ ಪರಿಹಾರ ಹಾಗೂ ಗ್ರಹದೋಷ ಪರಿಹಾರವಾಗಿ ಶ್ರೇಯಸ್ಸನ್ನುಂಟುಮಾಡುವನೆಂಬ ನಂಬಿಕೆ ಆಸ್ತಿಕ ಬಂಧುಗಳಲ್ಲಿ ಇದೆ
ಇಂದು ಶ್ರೀ ಗಣೇಶ ಚತುರ್ಥಿಯ ವಿಶೇಷ ದಿನವಾಗಿದ್ದು ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.
ಕೆ. ಗಣೇಶ್ ಹೆಗ್ಡೆ, ಕುಂದಾಪುರ
![]()


