ಕುಂದಾಪುರ : ಕಲಿಯುಗದಲ್ಲಿ ದ್ವಿಭುಜ ಗಣೇಶನಿಗೆ ಪ್ರಾಶಸ್ತ್ರ, ಹಟ್ಟಿಯಂಗಡಿ ಕ್ಷೇತ್ರದಲ್ಲಿ ಬಂದು ಬೇಡಿಕೊಂಡಾಗ ಭಕ್ತರ ಇಚ್ಛೆ ಈಡೇರುತ್ತದೆ, ಕಲಿಯುಗದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಓಟದ ವೇಗದಲ್ಲಿ ನಿರತರು. ಈ ಓಟಕ್ಕೆ ಶಕ್ತಿ ತುಂಬುವ ದೇವರು ಗಣಪತಿ ಎಂದು ಸ್ವರ್ಣವಲ್ಲಿ ಶ್ರೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಹಟ್ಟಿಯಂಗಡಿ ಸಿದ್ದಿವಿನಾಯಕ ದೇವರ ನೂತನ ಶಿಲಾಮಯ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಇಂದು ಹಳ್ಳಿಗಳು ಹೊಸ ತಲೆಮಾರುಗಳಿಲ್ಲದೆ ಖಾಲಿಯಾಗುತ್ತಿರುವುದು ಅನಾರೋಗ್ಯಕರ ಬೆಳವಣಿಗೆ. ಮಕ್ಕಳಿಗೆ ನಾವು ಸಂಸ್ಕಾರ ಕಲಿಸುವ ಕಾರ್ಯ ಮಾಡಬೇಕಾಗಿದೆ. ನಮ್ಮ ಸಂಸ್ಕಾರ, ಧರ್ಮ ಕಲಿಸದೇ ಇದ್ದಾರೆ ಮುಂದಿನ ದಿನಗಳಲ್ಲಿ ದೇವಸ್ಥಾನದ ಕಾರ್ಯಕ್ರಮ ನಡೆಯುವುದು ಕಷ್ಟ ದೇವಸ್ಥಾನಗಳು ಸ್ವಾಯತ್ತವಾಗಿರಬೇಕು. ಅದರಲ್ಲಿ ಸರಕಾರಿ ಹಸ್ತಕ್ಷೇಪ ಸಲ್ಲ, ದೇಗುಲಗಳ ಸರಕಾರೀಕರಣ ವಿರೋಧಿಸಬೇಕು ಎಂದರು.
ದೇವಳದ ಧರ್ಮದರ್ಶಿ ಎಚ್.ಬಾಲಚಂದ್ರ ಭಟ್ಟ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣಕುಮಾರ್, ಅಧ್ಯಕ್ಷ ಎಲ್.ತಿ.ತಿಮ್ಮಪ್ಪ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ರಮಾದೇವಿ ರಾಚಂದ್ರ ಭಟ್, ಅಧ್ಯಕ್ಷ ಅಪಣ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ರಾಧಾಕೃಷ್ಣ ಭಟ್ಟ ಭಟ್ಕಳ ಸ್ವಾಗತಿಸಿದರು.