ಕೊಲ್ಲೂರು : ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಗುರುವಾರ ಕುಟುಂಬ ಸಮೇತರಾಗಿ ಇಲ್ಲಿನ ಪ್ರಸಿದ್ದ ಪುಣ್ಯಕ್ಷೇತ್ರವಾದ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಧ್ಯಾಹ್ನ 1.30ರ ವೇಳೆ ಆಗಮಿಸಿದ ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಂಪ್ರದಾಯದಂತೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಚಿವರು ನಾಡಿನ ಒಳಿತಿಗಾಗಿ ಮೂಕಾಂಬಿಕಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು
ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹಾಗೂ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಗೌರವಿಸಲಾಯಿತು. ನಂತರ ದೇವಳದ ಚಿನ್ನದ ರಥ ವೀಕ್ಷಿಸಿ, ದೇವಳ ಭೋಜನ ಪ್ರಸಾದ ಸ್ವೀಕರಿಸಿದರು.
ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು: ಸಚಿವರನ್ನು ದೇವಸ್ಥಾನದ ಆವರಣದಲ್ಲಿ ಕಂಡ ತಕ್ಷಣ ಅಭಿಮಾನಿಗಳು ಸೆಲ್ಪಿ ತೆಗೆಸಿಕೊಳ್ಳಲು ‘ಮುಗಿಬಿದ್ದರು. ಸಚಿವರ ಭೇಟಿ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು