ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೆ
| ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||
ಶ್ರಾವಣ ಮಾಸ ಹಬ್ಬಗಳ ಮಾಸ. ಹೆಣ್ಣುಮಕ್ಕಳು ಸಿಂಗರಿಸಿಕೊಂಡು ಸಂಭ್ರಮಿಸುತ್ತಾರೆ. ಎಷ್ಟೇ ಆಧುನಿಕ ಪಶ್ಚಿಮಾತ್ಯ ಜೀವನ ನಮ್ಮನ್ನು ಆವರಿಸಿದರೂ ನಾವು ನಮ್ಮ ಸಂಪ್ರದಾಯ ಪದ್ಧತಿಗಳನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ವರಮಹಾಲಕ್ಷ್ಮಿ ವ್ರತಗಳಂತಹ ಹಬ್ಬದ ಆಚರಣೆಗಳೇ ಸಾಕ್ಷಿ. ವಿಷ್ಣು ಪುರಾಣ ಮತ್ತು ನಾರದ ಪುರಾಣಗಳಲ್ಲಿ ವರಮಹಾಲಕ್ಷ್ಮಿ ವ್ರತದ ಬಗ್ಗೆ ಉಲ್ಲೇಖವಿದೆ.
ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ.
ಈ ದಿನ ಪತಿ-ಪತ್ನಿಯರಿಬ್ಬರೂ ಕೂಡಿ ವ್ರತ ಮಾಡಿದರೆ ಫಲ ದುಪ್ಪಟ್ಟು. ಮನೆಯಲ್ಲಿ ಸುಖ ಸಮೃದ್ಧಿ ವೃದ್ಧಿಯಾಗಿ ದಾರಿದ್ರತೆ ದೂರವಾಗುತ್ತದೆ. ಹೆಸರೇ ಸೂಚಿಸುವಂತೆ ವರಲಕ್ಷ್ಮಿ ಎಂದರೆ ಇಷ್ಟಾರ್ಥ ಸಿದ್ದಿ ಕರುಣಿಸುವ, ವರ ಕೊಡುವ ಲಕ್ಷ್ಮಿ. ಧನ, ಸಂಪತ್ತು, ಜ್ಞಾನ, ಪ್ರೇಮ, ಪ್ರತಿಷ್ಠೆ,ನೆಮ್ಮದಿ,ಸಂತೋಷ, ಆರೋಗ್ಯ, ಸೌಂದರ್ಯ ಎಲ್ಲವೂ ಪ್ರಾಪ್ತವಾಗಿ ದಾಂಪತ್ಯ ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ಪತಿಯು ದೀರ್ಘಾಯುವಾಗಿ ಸಂತಾನ ಪ್ರಾಪ್ತಿಯಾಗುವುದು.
ಈ ದಿನ ವಿಷ್ಣು ಸಹಸ್ರನಾಮ ಪಠಣೆಯನ್ನು ಮಾಡಿದರೆ ಉತ್ತಮ. ಭಕ್ತಿಯಿಂದ ಪೂಜಿಸುವವರೇ ಸರ್ವೋತ್ತಮರು. ಕುಂಕುಮಾರ್ಚನೆ ಮಾಡಿ 12 ಗಂಟಿನ ದಾರವನ್ನು ದೇವಿಯ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಕೈಗೆ ಕಟ್ಟಿಕೊಳ್ಳುತ್ತಾರೆ.
ಲಕ್ಷ್ಮಿಗೆ ಲವಂಗ ಅತ್ಯಂತ ಪ್ರಿಯ. ಉಪವಾಸ ಹಾಗೂ ಪೂಜೆಯ ನಂತರ ಎರಡು ಲವಂಗಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿಟ್ಟರೆ ಧನ ಸಮಸ್ಯೆ ಬಾರದು.
ಇಡೀ ಮನೆಯ ಮೂಲೆ ಮೂಲೆಗೂ ಲಕ್ಷ್ಮಿಗೆ ಪ್ರಿಯವಾದ ದಕ್ಷಿಣಾಮೂರ್ತಿ ಶಂಖವನ್ನು ಓದುವುದರಿಂದ ಋಣಾತ್ಮಕ ಶಕ್ತಿಗಳು ಹೊರಗೆ ಹೋಗಿ ಲಕ್ಷ್ಮಿ ಪ್ರಸನ್ನಳಾಗಿ ಧನ ಸಂಪತ್ತು ನೀಡುವಳು. ನಿತ್ಯ ಶುದ್ಧ ಬುದ್ಧ ಮುಕ್ತ ಸ್ವರೂಪಳಾದ ಮಂಗಲದೇವತೆಯಾದ ತಾಯಿಯನ್ನು ಕ್ಷೀರ ಸಮುದ್ರ ಸಂಭವೇ, ಸಮುದ್ರರಾಜನ ಮಗಳು, ಕಮಲಜೆ ಎಂದೆಲ್ಲಾ ಕರೆಯುವರು. ಪೂಜೆ ಮಾಡುವಾಗ ಒದ್ದೆ ಕೂದಲು ಇರಬಾರದು. ಕೂದಲು ಬಿಚ್ಚಿ ಹರಡಿರಬಾರದು. ಜಡೆ ಹಾಕಿರಬೇಕು ಹಣೆಗೆ ಕುಂಕುಮ ಹಚ್ಚಿರಬೇಕು ಒಂಟಿಯಾಗಿ ಮಾಡಬಾರದು. ಆಡಂಬರ ಇರಬಾರದು. ಸಮಸಂಖ್ಯೆಯ ಸಿಹಿ ತಿಂಡಿ ಮಾಡಬಾರದು ಬಲವಂತದಿಂದ ಪೂಜೆ ಮಾಡಬಾರದು. ದಾನ ರೂಪದಲ್ಲಿ ಕೊಡುವ ಅಕ್ಕಿ, ಬೇಳೆ,ಬಟ್ಟೆ, ಹಾಳಾಗಿರಬಾರದು.
ಹೆಂಡತಿ ಮಕ್ಕಳಿಗೆ ಲಕ್ಷ್ಮಿಯ ರೂಪ ಎನ್ನುತ್ತಾರೆ. ಹೆಣ್ಣಿಗೆ ಗೌರವ ಕೊಡದವರ ಜೇಬಲ್ಲಿ ಲಕ್ಷ್ಮಿ ನಿಲ್ಲೋದಿಲ್ಲ.ಬೇಕಾಬಿಟ್ಟಿ ಖರ್ಚು ಮಾಡುವವರ ಬಳಿ ಕೂಡ ಲಕ್ಷ್ಮಿ ನಿಲ್ಲಲಾರಳು. ಗೌರವ ಇಲ್ಲದ ಕಡೆ,ದಾನ ಧರ್ಮ ಮರೆತ ಜನರಿಂದ ಲಕ್ಷ್ಮಿ ದೂರವಿರುತ್ತಾಳೆ. ಸಿಟ್ಟು ಮಾಡುವುದು, ಗುರು ಹಿರಿಯರಿಗೆ ಅಪಮಾನ ಮಾಡುವುದು, ಗಲೀಜು ಇರುವಂತಹ ಸ್ಥಳಗಳು,ಸ್ತ್ರೀಯರಿಗೆ ಅಪಮಾನ ಆಗುವಂತಹ ಕಡೆ ಹಾಗೂ ಪೂಜೆ ಇಲ್ಲದ ಕಡೆ ಲಕ್ಷ್ಮಿ ನಿಲ್ಲಳು.
ವರಮಹಾಲಕ್ಷ್ಮಿ ಕಥೆ
ನೈಮಿಷ ಅರಣ್ಯದಲ್ಲಿ ಶುನಕಾದಿ ಮುನಿಗಳು ತ್ರಿಕಾಲ ಧ್ಯಾನಿಯಾದ ಸೂತ ಮಹರ್ಷಿಗಳನ್ನು ಜಗತ್ತಿಗೆ ಒಳಿತಾಗುವ ಸರ್ವ ಸೌಭಾಗ್ಯಗಳನ್ನು ಕೊಡುವ ಉತ್ತಮವಾದ ವೃತ ಯಾವುದು ಎಂದಾಗ ಸೂತ ಮುನಿಗಳು ಈ ಕಥೆ ಹೇಳುತ್ತಾರೆ. ಒಮ್ಮೆ ಕೈಲಾಸದಲ್ಲಿ ಶಿವ ಪಾರ್ವತಿಯರು ಏಕಾಂತದಲ್ಲಿರುವಾಗ “ದಾನವರು ತಪಸ್ಸು ಮಾಡಲು ವರ ಕೊಡುವಿರಿ ಸಾಮಾನ್ಯ ಜನರು ನಿಮ್ಮ ನಾಮಸ್ಮರಣೆ ಮಾಡುತ್ತಾರೆ ಅವರ ದಾರಿದ್ರ್ಯ ಹರಣ ಹೇಗೆ? ವಿವಾಹಿತ ಮಹಿಳೆ ಪತಿಯ ಪ್ರೇಮ, ಮಕ್ಕಳ ಸುಖ, ಸಾಕಷ್ಟು ಧನ ಸಂಪತ್ತು ಪಡೆಯುವುದು ಹೇಗೆ? ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತ ಮಾಡಿದರೆ ಶ್ರೇಷ್ಠ?” ಎಂದು ಪಾರ್ವತಿಯು ಕೇಳಿದಾಗ ಈಶ್ವರನು ವರಮಹಾಲಕ್ಷ್ಮಿ ವ್ರತವೇ ಶ್ರೇಷ್ಠ ಎಂದು ಕಥೆ ಹೇಳುತ್ತಾನೆ. ಹಿಂದೆ ಮಗದ ದೇಶದ ಕುಂಡಿನ ಗ್ರಾಮದಲ್ಲಿ ಚಾರುಮತಿ ಎಂಬ ಮಹಿಳೆ ಪತಿವ್ರತೆಯೂ ಸಾದ್ವಿಯೂ ಆಗಿ ತನ್ನ ಪತಿ ಅತ್ತೆ ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ತನ್ನ ಕಾಯಿಲೆ ಪೀಡಿತ ಅತ್ತೆ ಮಾವಂದಿರ ಸೇವೆ ಮಾಡುತ್ತಿದ್ದು ದಿನವೂ ಉಲ್ಬಣಗೊಳ್ಳುತ್ತಿರುವ ಕಾಯಿಲೆ ಬಗ್ಗೆ ತೀವ್ರ ಶೋಕದಿಂದ ದೇವಿಯನ್ನು ಅವರ ಆರೋಗ್ಯ ಭಾಗ್ಯಕ್ಕಾಗಿ ಬೇಡುತ್ತಿರುತ್ತಾಳೆ. ಒಂದು ದಿನ ಕನಸಿನಲ್ಲಿ ಮಹಾಲಕ್ಷ್ಮಿ ಅವಳಿಗೆ ವರಮಹಾಲಕ್ಷ್ಮಿ ವ್ರತದ ಆಚರಣಾ ವಿಧಿಗಳನ್ನು ತಿಳಿಸಿ ಮಾಡುವಂತೆ ಹೇಳುತ್ತಾಳೆ. ಅದರಂತೆ ಸ್ನೇಹಿತೆಯರೊಂದಿಗೆ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ವ್ರತ ಮಾಡುತ್ತಾಳೆ. ಕಳಶಕ್ಕೆ ಪ್ರದಕ್ಷಣೆ ಹಾಕುವಾಗ ಎಲ್ಲರ ಮೈಯಲ್ಲೂ ಚಿನ್ನ, ಧನ, ಸಂಪತ್ತು, ಆನೆ, ಕುದುರೆ ಎಲ್ಲವೂ ಲಭಿಸುತ್ತದೆ ಇದರಿಂದ ಎಲ್ಲರ ಇಷ್ಟಾರ್ಥ ಸಿದ್ಧಿಯಾಗಿ ಎಲ್ಲರೂ ಈ ವ್ರತವನ್ನು ನಿಷ್ಠೆ ಭಕ್ತಿಯಿಂದ ಆಚರಿಸತೊಡಗುತ್ತಾರೆ.
ವ್ರತ ಯಾರಿಗಾಗಿ?
ಪತಿಗಾಗಿ ? ಮಕ್ಕಳಿಗಾಗಿ ?
ನಮಗಾಗಿ.. ವರ್ಷಕ್ಕೊಮ್ಮೆ ನಾನು ಪವಿತ್ರಳು, ನಾನು ಶಕ್ತಿ, ನಾನು ಲಕ್ಷ್ಮಿ ಎಂದು ನೆನಪಿಸಿಕೊಳ್ಳಲು. ನಾನು ಬದಲಾಗಿದ್ದೇನೆಯೇ? ದುಃಖ ಮರೆತು ಆರಾಧಿಸಿದ್ದೇನೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಲು. ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕ ವರ್ಕ್ ಲೋಡ್ ಜಾಸ್ತಿ. ಮನೆಯ ಒಳಗೆ ಹೊರಗೆ ಕೆಲಸ ಕುಟುಂಬ ಮಕ್ಕಳ ಜವಾಬ್ದಾರಿ ಒತ್ತಡವನ್ನು ಹೆಚ್ಚು ಮಾಡುತ್ತದೆ. ಪೂಜೆಗೆ ತಯಾರಿ ಮಾಡುವ ಕೆಲಸಗಳಲ್ಲಿ ತೊಡಗಿದಾಗ ಮನಸ್ಸಿಗೆ ವಿಶ್ರಾಮ ಸಿಗುತ್ತದೆ. ಬಣ್ಣ ಬಣ್ಣದ ಹೂವಿನ ಅಲಂಕಾರ, ಊದುಬತ್ತಿಯ ಸುವಾಸನೆ, ಥೆರಪಿಯಂತೆ ಕೆಲಸ ಮಾಡುತ್ತವೆ. ರಿಂದ ಹ್ಯಾಪಿ ಹಾರ್ಮೋನ್ ಗಳಾದ ಡೊಪಮಿನ್ ಮತ್ತು ಸೆರೋಟಿನಿನ್ ಹಾರ್ಮೋನುಗಳು ಬಿಡುಗಡೆಯಾಗಿ ಸಂತೋಷ ಲಭಿಸುತ್ತದೆ. ತಾಂಬೂಲ ವಿನಿಮಯ, ಎಲ್ಲರೊಂದಿಗೆ ಪೂಜೆ,ಮಾತುಕತೆ ಬಾಂಧವ್ಯದ ಹಾರ್ಮೋನ್ ಆದ ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡಿ ಬಾಂಧವ್ಯ ಗಟ್ಟಿಯಾಗುತ್ತದೆ. ಇದರಿಂದ ಕಾರ್ಟಿಸೋಲ್ ಎಂಬ ಸ್ಟ್ರೆಸ್ ಹಾರ್ಮೋನ್ನ ಉತ್ಪತ್ತಿ ಕಡಿಮೆಯಾಗಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನರ ವಿಜ್ಞಾನ ಕೂಡ ಆಧ್ಯಾತ್ಮಿಕತೆ ಮತ್ತು ಭಕ್ತಿಯಿಂದ ಮಾನಸಿಕ ಶಾಂತಿ ಹಾಗೂ ಸಂತೋಷ ಹೆಚ್ಚುವುದೆಂದು ಒಪ್ಪಿಕೊಂಡಿದೆ.
“ಓಂ ಶ್ರೀಂ ಮಹಾಲಕ್ಷ್ಮ್ಯೈ ನಮಃ” ಮಂತ್ರ ಪಠಣದಿಂದ ತುಳಿನ ಅಲ್ಫಾ ವೇವ್ಸ್ ಹೆಚ್ಚಾಗಿ ಮನಸ್ಸು ಶಾಂತವಾಗುವುದು. ಮಂತ್ರ ಪಠಣ ಮಾಡುವಾಗ ಮನಸ್ಸು ಕೇಂದ್ರೀಕೃತವಾಗಿರುವುದರಿಂದ ಮಾನಸಿಕ ಸಮತೋಲನ ಉಂಟಾಗಿ ಉಸಿರಾಟ ದೀರ್ಘವಾಗಿ, ರಕ್ತದ ಒತ್ತಡವೂ ಕಡಿಮೆಯಾಗುವುದು. ತುಪ್ಪದ ದೀಪದಿಂದ ವಾತಾವರಣ ಸ್ವಚ್ಛವಾಗಿ ಆತಂಕ ಶಮನವಾಗುವುದು. ಎಲ್ಲರೊಂದಿಗೆ ಬೆರೆತಾಗ ಒಂಟಿತನವೂ ನಿವಾರಣೆಯಾಗುವುದು. ಪ್ರೀತಿಯ ತಾಂಬೂಲ ಔಷಧೀಯ ತತ್ವವಾಗಿ ದೇಹಕ್ಕೂ ಮನಸ್ಸಿಗೂ ತೆರಪಿಯಂತೆ ಕೆಲಸ ಮಾಡುವುದು.
ಕಳಶ
ಪೂಜೆಯಲ್ಲಿ ಬಳಸುವ ಕಳಶದಲ್ಲಿ ತಾಮ್ರದ ಚೊಂಬು ಮಾಂಡದ ಗರ್ಭವಾದರೆ ಅದರೊಳಗಿರುವ ನೀರು ಚೈತನ್ಯ ಶಕ್ತಿ. ತೆಂಗಿನ ಕಾಯಿ ಶಿರಸ್ಸು, ಆಧ್ಯಾತ್ಮಿಕತೆಯ ಸಂಕೇತ. ಐದು ಮಾವಿನ ಎಲೆಗಳು ಪ್ರಾಣಶಕ್ತಿ ಹಾಗೂ ಐದು ಇಂದ್ರಿಯಗಳನ್ನು ಪ್ರತಿನಿಧಿಸುತ್ತವೆ. ಉಪವಾಸದಿಂದ ದೇಹಕ್ಕೆ ವಿಶ್ರಾಂತಿ ಲಭಿಸುವುದು. ಮನಸ್ಸು ಶುದ್ದಿಯಾಗುವುದು. ಸಮಾಜದಲ್ಲಿ ಒಗ್ಗಟ್ಟು ಉಂಟಾಗಿ ಆತ್ಮಕ್ಕೆ ಭಗವಂತನ ಸಂಪರ್ಕವಾಗುವುದು. ಹೆಣ್ಣು ಮನೆಯಲ್ಲಿ ದೀಪ ಬೆಳಗಿದರೆ ಮನೆ ಬೆಳಗುವುದು. ಎಲ್ಲರೂ ಒಟ್ಟಾಗಿ ಬೆಳಗಿದರೆ ಸಮಾಜವೇ ಬೆಳಗುವುದು. ಒಂದು ಸಂಶೋಧನೆಯ ಪ್ರಕಾರ ಎಲ್ಲರೂ ಒಟ್ಟಾಗಿ ಮಂತ್ರಪಠಿಸುವುದರಿಂದ ಅಥವಾ ಭಜನೆ ಹೇಳುವುದರಿಂದ ಮಾನಸಿಕ ಆಘಾತ ಹಾಗೂ ಹೃದಯಘಾತ ಕಡಿಮೆಯಾಗುವುದು.
ಧರ್ಮದ ಆಚರಣೆಯಲ್ಲಿ ಆರೋಗ್ಯದ ಸೂತ್ರ ಅಳವಡಿಸಿಕೊಂಡ ಏಕೈಕ ಪರಂಪರೆ ನಮ್ಮ ಭಾರತೀಯ ಪರಂಪರೆ. ಪ್ರತಿಯೊಂದು ಆಚಾರದಲ್ಲೂ ಒಂದು ವಿಚಾರವಿದೆ. ಪ್ರತಿಯೊಂದು ಧರ್ಮಾಚರಣೆಯಲ್ಲೂ ಒಂದು ಜ್ಞಾನವಿದೆ, ವಿಜ್ಞಾನವಿದೆ. ಪ್ರತಿಯೊಂದು ಸಂಪ್ರದಾಯದಲ್ಲೂ ಸಂಸ್ಕಾರ ಸಿದ್ಧಾಂತ ಶಾಸ್ತ್ರಿಯತೆ ಇದೆ. ಅದನ್ನು ಅರಿತು ಆಚರಿಸಬೇಕು.
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳೊಂದಿಗೆ,
ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

