ಬೆಂಗಳೂರು : ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಸದನದಿಂದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಆದೇಶಿಸಿರುವುದು ವಿಧಾನಸಭೆ ಸಚಿವಾಲಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.
ಸದನಕ್ಕೆ ಅಗೌರವ ತೋರಿದ ಕಾರಣಕ್ಕಾಗಿ ಈ ಹಿಂದೆ ಶಾಸಕರ ವಿರುದ್ಧ ಕ್ರಮ ಕೈಗೊಂಡಿರುವ ಹಲವು ಉದಾರಣೆಗಳಿವೆ. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಒಮ್ಮೆಲೆ ಕ್ರಮ ಕೈಗೊಂಡಿರುವುದು ಇದೇ ಮೊದಲು’ ಎನ್ನಲಾಗಿದೆ. ಅಲ್ಲದೆ, ಶಾಸಕರ ವಿರುದ್ಧ ಸದನ ನಡೆಯುವ ವೇಳೆ ಆ ಅಧಿವೇಶನದ ಮಟ್ಟಿಗೆ ಅಮಾನತು ಮಾಡಿದ ಉದಾಹರಣೆ ಇದ್ದು, 6 ತಿಂಗಳ ಕಾಲ ಅಮಾನತುಗೊಳಿಸಿ ಆದೇಶ ಮಾಡಿರುವುದು ಸಹ ಮೊದಲ ಬಾರಿ ಎಂದು ಮೂಲಗಳು ಹೇಳಿವೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಆಗ ಸದನದೊಳಗೆ ಪ್ರವೇಶಿಸಲು ಬಾಗಿಲನ್ನೇ ಒದ್ದ ಪ್ರಕರಣ ನಡೆಯಿತು. ಈ ಸಂಬಂಧ ಅವರು ಸೇರಿ ಇತರರನ್ನು ಒಂದು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಆದರೆ, ಆ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿರಲಿಲ್ಲ ಈಗ ಆರು ತಿಂಗಳ ಕಾಲ ಅಮಾನತು ಮಾಡಿರುವ ಬಗ್ಗೆ ಸಭಾಧ್ಯಕ್ಷರು ಆದೇಶವನ್ನೇ ಹೊರಡಿಸಿದ್ದಾರೆ.

