ಬೆಂಗಳೂರು : ಬ್ಯಾಗ್‌ನಲ್ಲಿ ಸ್ಫೋಟಕವಸ್ತು ಇರಿಸಿಕೊಂಡಿದ್ದ ಆರೋಪದ ಮೇರೆಗೆ ಹೋಟೆಲ್ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದು, ಜಪ್ತಿ ಮಾಡಲಾದ ಕೆಂಪು ಬಣ್ಣದ ಬಾಲ್ ಆಕಾರದ ಸ್ಪೋಟಕ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬೆಂಗಳೂರಿನ ಕೋಗಿಲು ಮುಖ್ಯ ರಸ್ತೆಯ ಬೆಳ್ಳಳ್ಳಿ ನಿವಾಸಿ ಅಬ್ದುಲ್ ರೆಹಮಾನ್ (23) ಬಂಧಿತ ಆರೋಪಿ ಈ ಸಂಬಂಧ ಸಂಪಿಗೆಹಳ್ಳಿ ಠಾಣೆ ಪಿಎಸ್‌ಐ ಕುಪೇಂದ್ರ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ ?
ಇತ್ತೀಚೆಗೆ ಥಣಿಸಂದ್ರ ಮುಖ್ಯ ರಸ್ತೆಯ ಶ್ರೀದೇವಿ ವೈಭವ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿ ಅಬ್ದುಲ್ ನನ್ನು ಆಧಾರ್ ಕಾರ್ಡ್ ಕೊಡುವಂತೆ ಹೋಟೆಲ್ ಮಾಲೀಕರು ಕೇಳಿದ್ದರು. ಕೊಡುವುದಾಗಿ ಹೇಳಿ 2 ದಿನ ಕಳೆದರೂ ಕೊಟ್ಟಿರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿಯೊಬ್ಬರು ಶೆಡ್‌ನಲ್ಲಿದ್ದ ಆರೋಪಿ ಬ್ಯಾಗ್ ಪರಿಶೀಲಿಸಿದಾಗ ಕೆಂಪು ಬಣ್ಣದ ಬಾಲ್ ಆಕಾರದ ಸ್ಪೋಟಕ ವಸ್ತು ಪತ್ತೆಯಾಗಿದೆ. ಹೋಟೆಲ್ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪರಿಶೀಲಿಸಿದಾಗ ಕೆಂಪು ಬಣ್ಣದ ಚೆಂಡಿನಂಥ ವಸ್ತುವಿನ ಮೇಲೆ ಬತ್ತಿಗಳು ಕಂಡು ಬಂದಿವೆ. ಈ ಬಗ್ಗೆ ಪ್ರಶ್ನಿಸಿದಾಗ ತಡವರಿಸಿ ಅದು ಸ್ಫೋಟಕ ವಸ್ತು ಎಂದಿದ್ದಾನೆ. ಸ್ಫೋಟಕ ಇರಿಸಿಕೊಳ್ಳಲು ಲೈಸೆನ್ಸ್ ಇದೆಯೇ ಎಂದು ಕೇಳಿದಾಗ ಇಲ್ಲ ಎಂದಿದ್ದಾನೆ. ತಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿ ವಸ್ತುವನ್ನು ವಶಕ್ಕೆ ಒಪ್ಪಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ವಿಚಾರಣೆಗಾಗಿ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ

