ಮಡಿಕೇರಿ : ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಸಲ್ಮಾನರ ಓಟ್ ಬ್ಯಾಂಕ್‌ಗಾಗಿ ಹಿಂದೂ ವಿರೋಧಿ ಧೋರಣೆ ಅನುಸರಿಸುವುದರೊಂದಿಗೆ ಮುಸಲ್ಮಾನರ ಓಲೈಕೆಗೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು, ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.4 ರಷ್ಟನ್ನು ಮುಸ್ಲಿಮರಿಗೆ ಮೀಸಲಿರಿಸಿದ್ದು, ಮುಸ್ಲಿಂ ಹೆಣ್ಣು ಮಕ್ಕಳ ವಿದೇಶಿ ವ್ಯಾಸಂಗಕ್ಕೆ 30 ಲಕ್ಷವನ್ನು ಸರ್ಕಾರ ಘೋಷಿಸಿದೆ. ಹಿಂದೂ ಸಮಾಜದಲ್ಲ ಬಡ ಹೆಣ್ಣು ಮಕ್ಕಳ ವಿದೇಶಿ ವ್ಯಾಸಂಗಕ್ಕೆ ಅವಕಾಶವಿಲ್ಲವೇ ? ಅವರೇನು ಅನ್ಯಾಯ ಮಾಡಿದ್ದಾರೆಂದು ಪ್ರಶ್ನಿಸಿದರು.
ಮುಸ್ಲಿಂ ಹೆಣ್ಣು ಮಕ್ಕಳ ವಿವಾಹಕ್ಕೆ 50 ಸಾವಿರ ರೂ. ನೆರವನ್ನು ಸರ್ಕಾರ ಘೋಷಿಸಿದೆ. ಹಿಂದೂ ಸಮಾಜದಲ್ಲಿ ಬಡ ಹೆಣ್ಣು ಮಕ್ಕಳಿಲ್ಲವೆ ಎಂದು ಕೇಳಿದ ವಿಜಯೇಂದ್ರ ಅವರು, ಮುಸ್ಲಿಂ ಓಲೈಕೆ ರಾಜಕಾರಣ ಅಕ್ಷಮ್ಯ ಅಪರಾಧವೆಂದು ತೀಕ್ಷವಾಗಿ ನುಡಿದರು

