ಕಲಬುರಗಿ : ಮುಖ್ಯಮಂತ್ರಿ ಸ್ಥಾನದ ಗೌರವ ಕಳೆದಿರುವ ರಾಜ್ಯದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾದ ಬಳಿಕ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಸರ್ವರಿಗೂ ಸಾಮಾಜಿಕ ನ್ಯಾಯ ನೀಡುವುದಾಗಿ ಭರವಸೆ ನೀಡಿ, ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತ ಸಿಎಂ ಸಿದ್ದರಾಮಯ್ಯ, ಜಾತಿ ಜನಗಣತಿ ಹೆಸರಿನಲ್ಲಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಮರಾಜ್ಯ ನಿರ್ಮಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದು ಈಗ ರಾಜ್ಯದ ಜನರನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ. ಎಲ್ಲರಿಗೂ ಉಚಿತ ಪ್ರಯಾಣ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈಗಲೂ ಗ್ರಾಮೀಣ ಭಾಗಗಳಲ್ಲಿ ಬಡ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಆರು ಸಾವಿರ ಕೋಟಿ ಹಣ ಕೆಎಸ್ಸಾರ್ಟಿಸಿಗೆ ಕೊಡುವುದನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದರು.

