ಚನ್ನಪಟ್ಟಣ : ಬಿಜೆಪಿ-ಜೆಡಿಎಸ್ ನ ‘ಮೈಸೂರು ಚಲೋ’ ಪಾದಯಾತ್ರೆಯ ಹೋರಾಟದ ಪರಿಣಾಮ ದೆಹಲಿಯ ಕಾಂಗ್ರೆಸ್ ವರಿಷ್ಠರು ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿಗಳ ಪರವಾಗಿ ಗಟ್ಟಿಯಾಗಿ ನಿಲ್ಲುವಂತೆ ಶಾಸಕರಿಗೆ ತಾಕೀತು ಮಾಡಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
‘ಮೈಸೂರು ಚಲೋ’ದ 3ನೇ ದಿನದ ಪಾದಯಾತ್ರೆಯಲ್ಲಿ ಚನ್ನಪಟ್ಟಣದ ತಾಲೂಕು ಕಚೇರಿ ಮುಂಭಾಗ ಬಹಿರಂಗ ಸಭೆಯಲ್ಲಿ ಮಾತನಾಡಿ, ನಮ್ಮ ಹೋರಾಟದ ಪರಿಣಾಮ ದೆಹಲಿಯಿಂದ ಕಾಂಗ್ರೆಸ್ ವರಿಷ್ಠರು ಬಂದಿದ್ದರು. ಮುಖ್ಯಮಂತ್ರಿಯವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ಆದರೂ ಮುಖ್ಯಮಂತ್ರಿಯವರ ಪರವಾಗಿ ಗಟ್ಟಿಯಾಗಿ ನಿಲ್ಲಿ’ ಎಂದು ಆಡಳಿತ ಪಕ್ಷದ ಶಾಸಕರಿಗೆ ತಾಕೀತು ಮಾಡಿದ್ದಾರೆ ಎಂದು ಟೀಕಿಸಿದರು.
ಯಾದಗಿರಿಯಲ್ಲಿ ದಲಿತ ಕುಟುಂಬಕ್ಕೆ ಸೇರಿದ ಪಿಎಸ್ಸೆ ಪರಶುರಾಮ, ಆಡಳಿತ ಪಕ್ಷದ ಶಾಸಕ 30 ಲಕ್ಷ ರು. ಲಂಚ ನೀಡಿ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆಯಿಂದ ಬಡವರು ಮನೆ ಕಳೆದುಕೊಂಡಿದ್ದಾರೆ. ಹಿಂದೆ ಯಡಿಯೂರಪ್ಪನವರು ಅಧಿಕಾರದಲ್ಲಿ ಇದ್ದಾಗ ಬಡವರು ಮನೆ ಕಳೆದುಕೊಂಡಾಗ ತಕ್ಷಣ 5 ಲಕ್ಷ ರು. ಪರಿಹಾರ ಕೊಡುತ್ತಿದ್ದರು. ಸಿದ್ದರಾಮಯ್ಯನವರು ಈಗ ಭಿಕ್ಷೆ ರೀತಿಯಲ್ಲಿ 1 ಲಕ್ಷ ರು. ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು