ಬೆಂಗಳೂರು : ‘ವಕ್ಸ್ ವಿರುದ್ದ ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ. ಏನಾದರೂ ಇದ್ದರೆ ವರಿಷ್ಠರ ಮುಂದೆ ಹೇಳಿ’ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಖಡಕ್ ಸೂಚನೆ ನೀಡಿದೆ. ಪರಿಣಾಮ ಯತ್ನಾಳ್ ವಿರುದ್ದ ಅಮಾನತಿನಂಥ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸರಿದೂಗಿಸುವ ದಿಕ್ಕಿನಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಡೆಸುತ್ತಿರುವ ವಕ್ಸ್ ವಿರುದ್ಧದ ಹೋರಾಟಕ್ಕೆ ಬ್ರೇಕ್ ಹಾಕದೆ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ.
ಜತೆಗೆ ಯತ್ನಾಳ್ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಅಥವಾ ಶನಿವಾರ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್ ಅವರು ಪ್ರಸ್ತಾಪಿಸಿ ಚರ್ಚಿಸುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಯಲ್ಲಿ ಒಡಕು ಮೂಡಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆಹಾರವಾಗದಂತೆ ನೋಡಿಕೊಳ್ಳುವತ್ತ ವರಿಷ್ಠರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

