ಬೆಂಗಳೂರು : ಆರ್ಥಿಕ ಹೊಣೆಗಾರಿಕೆ ಕಾಯ್ದೆ ಅಡಿಯಲ್ಲೇ ರಾಜ್ಯ ಸರ್ಕಾರ ಸಾಲ ಪಡೆಯುತ್ತಿದ್ದು, ಕೇಂದ್ರ ಸರ್ಕಾರದಂತೆ ನಾವು ಬೇಕಾಬಿಟ್ಟಿಯಾಗಿ ಸಾಲ ಪಡೆದು ಆಡಳಿತ ನಡೆಸುತ್ತಿಲ್ಲ ರಾಜ್ಯ ಬಜೆಟ್ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರ ರಾಜ್ಯವನ್ನು ಸಾಲದಲ್ಲಿ ಮುಳುಗಿಸುತ್ತಿದೆ ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ತಿರುಗೇಟು ನೀಡಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಸಾಲ ಪಡೆಯುವ ಮೇಲೆ ನಿಯಂತ್ರಣ ಹೇರಲು ಜಾರಿಗೊಳಿಸಲಾಗಿರುವ ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡದ ಅಡಿಯಲ್ಲೇ ರಾಜ್ಯ ಬಜೆಟ್ ರೂಪಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಹಣಕಾಸು ಕೊರತೆ ಹಾಗೂ ಸಾಲದ ಮಿತಿ ರಾಜ್ಯದ ಜಿಡಿಪಿಯ ಶೇ.25ಕ್ಕಿಂತ ಕಡಿಮೆ ಪ್ರಮಾಣದ ಸಾಲ ಪಡೆಯಬೇಕು ಎಂಬ ಮಾನದಂಡವಿದೆ. ಅದರಲ್ಲಿ ಈ ಬಾರಿ ಕೊರತೆ ಬಜೆಟ್ ಮಂಡಿಸಲಾಗಿದೆ. ಅದನ್ನು ಹೊರತುಪಡಿಸಿದರೆ ಉಳಿದೆರಡು ಅಂಶಗಳನ್ನು ಪಾಲಿಸಲಾಗಿದೆ. ಹಣಕಾಸು ಕೊರತೆ ಶೇ.2.91ರಷ್ಟಿದೆ ಹಾಗೂ ರಾಜ್ಯದ ಜಿಡಿಪಿಗಿಂತ ಶೇ.24.95ರಷ್ಟು ಸಾಲ ಪಡೆಯಲಾಗುತ್ತಿದೆ. ಇನ್ನು ಬಂಡವಾಳ ವೆಚ್ಚವನ್ನು 56 ಸಾವಿರ ಕೋಟಿ ರು. ಗಳಿಂದ 83 ಸಾವಿರ ಕೋಟಿ ರು.ಗೆ ಹೆಚ್ಚಿಸಿದ್ದೇವೆ. ವಿರೋಧ ಪಕ್ಷಗಳು ಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು ಜನರಿಗೆ ಸತ್ಯ ಹೇಳಲಿ ಎಂದರು.

