ಬೆಂಗಳೂರು : ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ಜಾತಿ ಗಣತಿ ವರದಿಯನ್ನು ಮಂಡಿಸಿದೆ. ಇದಕ್ಕೆ ಹಲವು ಸಮುದಾಯಗಳಿಂದ ಸಹಮತ ವ್ಯಕ್ತವಾಗಿದ್ದರೆ, ಇನ್ನೂ ಹಲವು ಪ್ರಬಲ ಸಮುದಾಯಗಳು ತೀವ್ರವಾಗಿ ವಿರೋಧಿಸುತ್ತಿವೆ. ಬಿಜೆಪಿ ನಾಯಕರು ಕೂಡ ಈ ವರದಿ ಬಗ್ಗೆ ಗಂಭೀರ ಆರೋಪ ಮಾಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ವರದಿ ವಿಚಾರ ವಿವಾದವಾಗುತ್ತಲೇ ಎಚ್ಚೆತ್ತು ಕೊಂಡಿರುವ ಸರ್ಕಾರ ಜಾತಿಗಣತಿ ವರದಿ ಕುರಿತು ಎಚ್ಚರಿಕೆ ಹೆಜ್ಜೆಯಿಡುತ್ತಿದೆ.
ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರ ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟವು ಈ ವರದಿಯನ್ನು ಪರಿಶೀಲಿಸಿ, ಚರ್ಚಿಸಲಿದೆ. ಅಲ್ಲಿರುವ ಸತ್ಯಾಂಶಗಳ ಆಧಾರದ ಮೇಲೆ ಎಲ್ಲರಿಗೂ ನ್ಯಾಯ ಸಿಗಲಿದೆ. ಆದರೆ ಈ ಜಾತಿ ಗಣತಿ ವರದಿ ವಿರುದ್ಧ ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ಬಗ್ಗೆ ಮಾತನಾಡಿದ್ದಾರೆ. ನಾನು ಬೇರೆ ಜಿಲ್ಲೆಗಳ ಪ್ರವಾಸದಲ್ಲಿದ್ದ ಕಾರಣ ಇನ್ನೂ ಈ ವರದಿ ಏನು ಎಂದು ನೋಡಿಲ್ಲ. ಅಲ್ಲದೆ ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ. ಚರ್ಚಿಸಬೇಕಾಗಿದ್ದು, ವಿಧಾನಸಭೆಯಲ್ಲೂ ಈ ಕುರಿತು ಚರ್ಚಿಸುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾಗಿ ಯಾರೂ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾತಿ ಗಣತಿ ವರದಿ ಬಗ್ಗೆ ಕೆಲವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿರಬಹುದು. ಆದರೆ, ನಾವು ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದರು.

