ಬೆಂಗಳೂರು : ಜಾತಿ ಗಣತಿ ವರದಿ ಬಗ್ಗೆ ಸಮುದಾಯಗಳಲ್ಲಿ ತೀವ್ರ ಆಕ್ಷೇಪ ಹಾಗೂ ಗೊಂದಲ ಇರುವುದರಿಂದ ಈ ವಿಚಾರದಲ್ಲಿ ತರಾತುರಿ ನಿರ್ಧಾರ ಬೇಡ ಎಂಬ ಲಿಂಗಾಯತ, ಒಕ್ಕಲಿಗ ಸಚಿವರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರದಿ ಕುರಿತು ಆಕ್ಷೇಪಣೆ ಹಾಗೂ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಸಚಿವರಿಗೆ ಸೂಚನೆ ನೀಡಿ ಸಂಪುಟ ಸಭೆಯನ್ನು ಮುಂದೂಡಿದ್ದಾರೆ.
ಇದರಿ೦ದಾಗಿ ವಿವಾದಿತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ (ಜಾತಿ ಆಧಾರಿತ ಜನ ಗಣತಿ) ವರದಿ ಕುರಿತು ಸಚಿವರ ಅಭಿಪ್ರಾಯ ಪಡೆಯಲು ಗುರುವಾರ ಕರೆಯಲಾಗಿದ್ದ ವಿಶೇಷ ಸಭೆ ಅಪೂರ್ಣಗೊಂಡಂತಾಗಿದೆ. ಬಹುತೇಕ ಮೇ 2 ರಂದು ಮತ್ತೊಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಸಚಿವರ ಆಕ್ಷೇಪ ಹಾಗೂ ಅಭಿಪ್ರಾಯಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸಿ ವಿಸ್ತ್ರತ ಚರ್ಚೆಗೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ.
ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಪ್ರವರ್ಗವಾರು ಜಾತಿ ವಿಂಗಡಣೆ, ಆರ್ಥಿಕ ಸ್ಥಿತಿ ಬಗ್ಗೆ ನಿರ್ಣಯ ಮಾಡಿರುವ ಮಾನದಂಡಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

