ಬೆಂಗಳೂರು : ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಸೇರಿ ಸಾಲು ಸಾಲು ಹಗರಣಗಳ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್‌ಗೆ ಮತ್ತೊಮ್ಮೆ ಭಾರೀ ಮುಖಭಂಗವಾಗಿದೆ. ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ಆಗ ಅಧಿಕಾರದಲ್ಲಿದ್ದ ಬಿಜೆಪಿ 40% ಕಮಿಷನ್ ಪಡೆದಿದೆ ಎಂದು ಪ್ರಚಾರ ಮಾಡಿತ್ತು. ಆ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಜಾಹೀರಾತನ್ನೂ ಕಾಂಗ್ರೆಸ್ ಪ್ರಕಟಿಸಿತ್ತು. ಇದರ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತ ಇಲಾಖೆ ಕಾಂಗ್ರೆಸ್ ಆರೋಪ ಸುಳ್ಳು ಎಂದು ವರದಿ ನೀಡಿದೆ.
ಬಿಜೆಪಿಯ ವಿರುದ್ಧ 40% ಕಮಿಷನ್ ಆರೋಪ ಮಾಡಿಯೇ ಚುನಾವಣೆ ಗೆದ್ದಿದ್ದು, ಆ ಪ್ರಚಾರವೇ ಸಿದ್ದರಾಮಯ್ಯ ಸರ್ಕಾರದ ಬಹುಮತಕ್ಕೆ ಕಾರಣ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು ಸದ್ಯ ಲೋಕಾಯುಕ್ತ ನೀಡಿರುವ ಈ ವರದಿಯಿಂದಾಗಿ ಕಾಂಗ್ರೆಸ್ ತಲೆತಗ್ಗಿಸುವಂತಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ಹಗರಣ ಸೇರಿ ವಿವಿಧ ಅವ್ಯವಹಾರಗಳ ತನಿಖೆಗೆ ಎಸ್‌ಐಟಿ ರಚಿಸುವ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇದರ ಬೆನ್ನಲ್ಲೇ ಅಂದಿನ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮಾಡಿದ್ದ 40% ಆರೋಪ ಸುಳ್ಳೆಂಬುದು ಗೊತ್ತಾಗಿರುವುದು ಬಿಜೆಪಿಗೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ.